ಚಳ್ಳಕೆರೆ
ನಗರದಲ್ಲಿ ಬುಧವಾರ ಬೆಳಗ್ಗೆ 11ಕ್ಕೆ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ಶ್ರೀವಾಲ್ಮೀಕಿ ಜಯಂತ್ಯೋತ್ಸದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಮಹರ್ಷಿ ಶ್ರೀವಾಲ್ಮೀಕಿ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸಮುದಾಯದ ಜನರು ಮೆರವಣಿಗೆಗೆ ಆಗಮಿಸಿದ್ದು ನನಗೆ ಸಂತಸ ತಂದಿದೆ. ಮಹರ್ಷಿ ಶ್ರೀವಾಲ್ಮೀಕಿಯವರೇ ಎಲ್ಲಾ ಸಮುದಾಯದ ಮಾರ್ಗದರ್ಶಕರಾಗಿದ್ಧಾರೆ. ಅವರಲ್ಲಿದ್ದ ಅಪಾರವಾದ ಜ್ಞಾನವನ್ನು ಬಳಸಿಕೊಂಡು ಪ್ರಸಿದ್ದ ವಾಲ್ಮೀಕಿ ರಾಮಾಯಣವನ್ನೇ ರಚಿಸಿದ್ದಾರೆ. ಸಮುದಾಯವೂ ಸೇರಿದಂತೆ ಸಮಸ್ತ ಮನುಕುಲ ಇವರ ಆದರ್ಶಗಳನ್ನು ಅಳವಡಿಸಿಕೊಳ್ಳುವತ್ತ ದೃಢ ಹೆಜ್ಜೆ ಇಡಬೇಕೆಂದರು.
ಮೆರವಣಿಗೆ ಪ್ರಾರಂಭವಾಗಿ ಕೆಲವೇ ಹೊತ್ತಿನಲ್ಲಿ ರಾಜ್ಯ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ವೆಂಕಟರಮಣಪ್ಪ ಮಾರ್ಗಮಧ್ಯದಲ್ಲೇ ಮೆರವಣಿಗೆ ಸೇರಿಕೊಂಡರು. ಸಾರೋಟಿನಲ್ಲಿ ಅಲಂಕೃತವಾಗಿದ್ದ ಶ್ರೀವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿದರು. ನಂತರ ವಾಲ್ಮೀಕಿ ವೃತ್ತಕ್ಕೆ ಆಗಮಿಸಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವಾರು ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತೆರಳಬೇಕಿದ್ದು, ಮಹರ್ಷಿಯ ಜಯಂತಿ ಕಾರ್ಯಕ್ರಮ ಯಶಸ್ಸಿಯಾಗಿ ನಡೆಸುವಂತೆ ಸೂಚಿಸಿದರಲ್ಲದೆ. ವಾಲ್ಮೀಕಿಯವರ ದಿವ್ಯ ದೃಷ್ಠಿ ಅಘಾದವಾದದ್ದು. ತಮ್ಮ ವೃತ್ತಿಯನ್ನು ಕೈಬಿಟ್ಟು ದೈವದ ಸಾಕ್ಷಾತ್ಕಾರಕ್ಕಾಗಿ ತಮ್ಮದೇಯಾದ ವಿಶೇಷ ಶಕ್ತಿಯಿಂದ ಜ್ಞಾನವನ್ನು ಸಂಪಾದಿಸಿದ ಮಹಾನ್ ಶ್ರೇಷ್ಠ ಸಂತರು ಶ್ರೀವಾಲ್ಮೀಕಿಯವರು ಎಂದರು.
ಬೃಹತ್ ಮೆರವಣಿಗೆಯಲ್ಲಿ ಮ್ಯಾಸಬೇಡ ಪಡೆ ಜೊತೆಗೆ ಕಲಾ ತಂಡಗಳು ವಿಶೇಷ ಆಕರ್ಷಣೆಯಾಗಿದ್ದು, ದಾರಿಯುದ್ದಕ್ಕೂ ಹಲವಾರು ನೃತ್ಯಗಳೊಂದಿಗೆ ಜನರ ಮನ ಸೆಳೆದವು. ಈ ಬಾರಿಯ ಮೆರವಣಿಗೆಯಲ್ಲಿ ಎರಡು ಡಿಜೆಗಳಿಗೆ ಅವಕಾಶ ನೀಡಿದ್ದು, ಮಹಿಳೆಯರ ಗುಂಪೊಂದು ಡಿಜೆಯ ಹಾಡಿಗೆ ಕುಣಿದು ಕುಪ್ಪಳಿಸಿದರು. ಅದೇ ರೀತಿ ಮತ್ತೊಂದು ಡಿಜೆಯ ಮುಂದೆ ನೂರಾರು ಯುವಕರು ಪ್ರತಿ ಹಾಡಿಗೂ ಕೇಕೆ ಹಾಕುತ್ತಾ ನರ್ತಿಸಿದರು. ಕೆಲವು ಹುಡುಗರು ಕಾಲಿಗೆ ಕೋಲು ಕಟ್ಟಿಕೊಂಡು ಹೆಜ್ಜೆ ಹಾಕಿದರಲ್ಲದೆ ಹಾಡಿಗೆ ತಕ್ಕಂತೆ ಕುಣಿದರು.
ಮೆರವಣಿಗೆಯಲ್ಲಿ ಸಮುದಾಯದ ಮುಖಂಡರಾದ ಎಚ್.ಎಂ.ಮಲ್ಲಪ್ಪನಾಯಕ, ಬಂಗೆಪ್ಪ ಮಾಸ್ಟರ್, ಕೆ.ಟಿ.ಕುಮಾರಸ್ವಾಮಿ, ಪಿ.ತಿಪ್ಪೇಸ್ವಾಮಿ, ಎಂ.ರವೀಶ್‍ಕುಮಾರ್, ರಾಮದಾಸ್, ಜಯಪಾಲಯ್ಯ, ಸೂರನಾಯಕ, ಸಿ.ಟಿ.ಶ್ರೀನಿವಾಸ್, ಸಾಹಿತಿ ಟಿ.ಜೆ.ತಿಪ್ಪೇಸ್ವಾಮಿ, ಸಿ.ಟಿ.ವೀರೇಶ್, ಡಿ.ಕೆ.ಕಾಟಯ್ಯ, ಡಾ.ನಾಗೇಂದ್ರನಾಯ್ಕ, ಎಲ್‍ಐಸಿ ತಿಪ್ಫೇಸ್ವಾಮಿ, ಎಲೆ ಭದ್ರಣ್ಣ, ನಗರಸಭಾ ಸದಸ್ಯರಾದ ಅರ್.ರುದ್ರನಾಯಕ, ಬಿ.ಟಿ.ರಮೇಶ್‍ಗೌಡ, ಎಸ್.ಜಯಣ್ಣ, ಕವಿತಾ, ಮಲ್ಲಿಕಾರ್ಜುನ, ಪ್ರಕಾಶ್, ಪ್ರಮೋದ್, ಕೆ.ಸಿ.ನಾಗರಾಜ, ಕವಿತಾನಾಯಕಿ, ಎಂ.ನಾಗಮಣಿ, ಎಂ.ಜೆ.ರಾಘವೇಂದ್ರ, ಎಚ್.ಪ್ರಶಾಂತ್‍ಕುಮಾರ್, ಎಚ್.ಸಿ.ವಿರೂಪಾಕ್ಷ, ಸಿ.ಶ್ರೀನಿವಾಸ್, ಮುಂತಾದವರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ