ಜನಸ್ಪಂದನದಲ್ಲಿ ಡಿಸಿ ಡಾ.ಬಗಾದಿ ಗೌತಮ್ ಭರವಸೆ

ದಾವಣಗೆರೆ :

     ಮನೆ ಇಲ್ಲದ ಹಲವರು ಸೂರಿಗಾಗಿ ಅರ್ಜಿ ಸಲ್ಲಿಸಿದ್ದು, ವಸತಿಹೀನರಿಗೆ ಮನೆ ಕಟ್ಟಿಸಿಕೊಡಲು 100 ಎಕರೆ ಜಮೀನು ಖರೀದಿಸಲು ತೀರ್ಮಾನಿಸಿದ್ದು, ಭೂಮಿ ಸಿಕ್ಕ ತಕ್ಷಣವೇ ಜಿ+2 ಮನೆ ಕಟ್ಟಿಸಿಕೊಡುವ ಮೂಲಕ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭರವಸೆ ನೀಡಿದರು.

        ಸೋಮವಾರ ನಗರದ ಜಿಲ್ಲಾಡಳಿತ ಭವನದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ವಸತಿ ಹೀನರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ನಗರದಲ್ಲಿ ಮನೆ ಇಲ್ಲದೇ ಸಾಕಷ್ಟು ಜನ ಇದ್ದಾರೆ. ಆಶ್ರಯ ಮನೆಗಳಿಗಾಗಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬೇಡಿಕೆಗೆ ಅನುಗುಣವಾಗಿ ಜಮೀನು ಸಿಗುತ್ತಿಲ್ಲ. ಹೀಗಾಗಿ ವಸ್ತಿ ಸೌಲಭ್ಯ ಕಲ್ಪಿಸುವುದು ವಿಳಂಬವಾಗುತ್ತಿದೆ. ತಾಲೂಕಿನ ದೊಡ್ಡಬಾತಿ ಬಳಿ 41 ಎಕರೆ ಜಮೀನು ಖರೀದಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. 100 ಎಕರೆ ಜಮೀನು ಖರೀದಿಸಲು ತೀರ್ಮಾನಿಸಿದ್ದು, ಜಮೀನು ಖರೀದಿಸಿದ ತಕ್ಷಣವೇ ಜಿ+2 ಮಾದರಿಯಲ್ಲಿ ಮನೆ ನಿರ್ಮಿಸಿಕೊಡುವ ಮೂಲಕ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದರು.

ಅಲೆಮಾರಿಳನ್ನ ಗುರುತಿಸಿ:

   ಆರನೇ ಕಲ್ಲು ಗ್ರಾಮದ ಅಲೆಮಾರಿಗಳು ದೂರು ನೀಡಿ, ನಾವು ಸುಮಾರು 25ರಿಂದ 30 ವರ್ಷಗಳಿಂದ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ಯಾವುದೇ ಮೂಲಭೂತ ಸೌಲಭ್ಯ, ವಿದ್ಯುಚ್ಚಕ್ತಿ ಸಂಪರ್ಕವಿಲ್ಲ. ತುಂಬಾ ಹಿಂದುಳಿದ ಜಾತಿಗಳಿಗೆ ಸೇರಿದವರಾಗಿದ್ದೇವೆ. ಆದ್ದರಿಂದ ನಮಗೆ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಇವರಿಗೆ ಆ ಗ್ರಾಮದ ಸುತ್ತಮುತ್ತ ಎಲ್ಲಿಯಾದರೂ ಅರ್ಧ ಎಕರೆ ಜಾಗ ನೋಡಿ, ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಿ. ಅಲ್ಲದೆ, ಇವರಂತೆ ಜಿಲ್ಲೆಯಲ್ಲಿ ಎಷ್ಟು ಜನ ಅಲೆಮಾರಿ-ಅರೆಅಲೆಮಾರಿಗಳಿದ್ದು, ಸಮೀಕ್ಷೆ ನಡೆಸಿ ಅವರನ್ನು ಗುರುತಿಸಿ. ಅಲೆಮಾರಿ-ಅರೆ ಅಲೆಮಾರಿಗಳ ಪೈಕಿ ಕೆಲವರು ಪರಿಶಿಷ್ಟ ಜಾತಯಿ ಮತ್ತು ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಬರಲಿದ್ದಾರೆ. ಹೀಗಾಗಿ ಅವರಿಗಾಗಿ ಸಾಕಷ್ಟು ಯೋಜನೆಗಳಿವೆ. ಮನೆ ಇಲ್ಲದವರಿಗೆ ಮನೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಸಮಾಜ ಕಲ್ಯಾಣ ಅಧಿಕಾರಿ ಶಿವಾನಂದ ಎಂ.ಕುಂಬಾರ್ ಅವರಿಗೆ ಸೂಚಿಸಿದರು.

ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್ ಸೇವೆ:

        ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮಾತನಾಡಿ, ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸಿ, ಸಾವು-ನೋವುಗಳಾಗುತ್ತಿವೆ. ಸಕಾಲದಲ್ಲಿ ಆ್ಯಂಬುಲೆನ್ಸ್ ಸೇವೆ ಸಿಗದ ಕಾರಣ ನಿಗದಿತ ವೇಳೆಯಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡ್ಡೊಯ್ಯಲಾಗುತ್ತಿಲ್ಲ. ಹೀಗಾಗಿ ಸ್ಥಳದಲ್ಲಿಯೇ ಮೃತ ಪಡುತ್ತಿದ್ದಾರೆ. ಇದಕ್ಕೆ ಮೊನ್ನೆ ಬಸ್ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಮೃತಪಟ್ಟಿರುವುದೇ ಸಾಕ್ಷಿಯಾಗಿದೆ. 108ಕ್ಕೆ ಕರೆ ಮಾಡಿದರೆ, ಆ್ಯಂಬುಲೆನ್ಸ್ ಸೇವೆ ಸಿಗುತ್ತಿಲ್ಲ. ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ಸಂಖ್ಯೆಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ. ಆದ್ದರಿಂದ ರೈಲ್ವೆ, ಬಸ್ ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿ ತುರ್ತು ಸೇವೆ ನೀಡಬೇಕೆಂದು ಮನವಿ ಮಾಡಿದರು.

       ಇಕ್ಕದೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವಷ್ಟು ಹೆಚ್ಚುವರಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ ಅವರಿಗೆ ಸೂಚಿಸಿದರು.

ಪಾಲಿಕೆ ಜಾಗ ಒತ್ತುವರಿ:

       ಸಾಮಾಜಿಕ ಕಾರ್ಯಕರ್ತ ಹರೀಶ್‍ಹಳ್ಳಿ ಅರ್ಜಿ ನೀಡಿ, ಪಿಬಿ ರಸ್ತೆಯಲ್ಲಿರುವ ರಿಲಯನ್ಸ್ ಸೂಪರ್ ಮಾರ್ಕೆಟ್‍ನವರು 30 ಅಡಿ ಮಹಾನಗರ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಬೇಕು. ನಗರದಲ್ಲಿ 200ಕ್ಕೂ ಹೆಚ್ಚು ಅನಧಿಕೃತ ಲ್ಯಾಬ್‍ಗಳಿದ್ದು ಅವುಗಳನ್ನು ಮುಚ್ಚಿಸಬೇಕೆಂದು ಒತ್ತಾಯಿಸಿದರು.

ಮಹನೀಯರ ಹೆಸರಿಡಿ:

       ಮಾದಿಗ ಸಮಾಜದ ಚಿಂತಕರ ವೇದಿಕೆಯಿಂದ ಮನವಿ ಸಲ್ಲಿಸಿ, ಜಿಲ್ಲಾಡಳಿತ ಭವನಕ್ಕೆ ದಿವಂಗತ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹೆಸರು ನಾಮಕರಣ ಮಾಡಬೇಕು. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಪ್ರತಿಮೆ ನಿರ್ಮಿಸಬೇಕು. ದಾವಣಗೆರೆ ನಗರ ಮತ್ತು ಹರಿಹರ ರೈಲ್ವೆ ನಿಲ್ದಾಣಕ್ಕೆ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪೆÇ್ರ.ಬಿ.ಕೃಷ್ಣಪ್ಪನವರ ಹೆಸರು ಇಡಬೇಕೆಂದು ಒತ್ತಾಯಿಸಿತು.

ಪರ್ಯಾಯ ವ್ಯವಸ್ಥೆ ಕಲ್ಪಿಸಿ:

      ಪಾಲಿಕೆ ಎದುರಿನ ಬೀದಿ ಬದಿ ವ್ಯಾಪಾರಿಗಳು, ಅಪಘಾತ ಹಾಗೂ ನೈರ್ಮಲ್ಯದ ಕಾರಣ ನೀಡಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಹಲವಾರು ವರ್ಷಗಳಿಂದ ಅಲ್ಲಿಯೇ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮಗೆ ಪರ್ಯಾಯ ಜಾಗ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.

     ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಕಳೆದ 8 ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣ ಆಗಿಲ್ಲ. ಈಗ ನಿವೇಶನ ದೊರೆತಿದೆ ತಮ್ಮ ಅವಧಿಯಲ್ಲಾದರೂ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಕೊಡಿ ಎಂದರು.

     ವಾಕ್ ಮತ್ತು ಶ್ರವಣದೋಷವುಳ್ಳರು ನಮಗೆ ನಾನಾ ಇಲಾಖೆ ಗಳಲ್ಲಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ನಿರ್ಮಿತ ಕೇಂದ್ರ, ಮ್ಯಾನ್ ಪವರ್ ಏಜೆನ್ಸಿ, ಖಾದಿ ಮತ್ತು ಗ್ರಾಮೋದ್ಯೋಗ, ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಕರೆಯಿಸಿ. ವಿಕಲಚೇತರನ್ನು ಒಂದೆಡೇ ಸೇರಿಸಿ ಅವರಿಗೆ ಇರುವ ಉದ್ಯೋಗವಕಾಶಗಳು, ಸೌಲಭ್ಯಗಳ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್‍ಗೆ ಸೂಚಿಸಿದರು.

       ಕಳೆದ 17-18 ವರ್ಷಗಳಿಂದ ಪೌರಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಆದರೆ ಏಜನ್ಸಿಯವರು ಸರಿಯಾಗಿ ವೇತನ ನೀಡುತ್ತಿಲ್ಲ. ಕೆಲಸ ಮಾಡದಿರುವರ ಹೆಸರಿಗೆ, ಕಾಲೇಜು ಓದುತ್ತಿರುವ ಹೆಣ್ಣು ಮಕ್ಕಳ ಹೆಸರಿನಲ್ಲಿ ಹಣ ಪಾವತಿಯಾಗುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಕಾರ್ಮಿಕರು ಆಗ್ರಹಿಸಿದರು.

      ಜಿಲ್ಲಾಧಿಕಾರಿಗಳು ಕೆಲಸ ಮಾಡಿಸಿಕೊಂಡು ಕೂಲಿ ಕೊಡುತ್ತಿಲ್ಲವೆಂದರೆ ಹೇಗೆ? ಈ ಕೂಡಲೇ ಅವರಿಗೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

      ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಹೆಚ್.ವಿಜಯ್‍ಕುಮಾರ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಎನ್.ಟಿ.ಯರ್ರಿಸ್ವಾಮಿ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಡೂಡಾ ಆಯುಕ್ತ ಆದಪ್ಪ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link