ಮೂಲಭೂತ ಸೌಲಭ್ಯ ವಂಚಿತ ಮೊರಾರ್ಜಿ ಶಾಲೆ

ಹೊಳಲ್ಕೆರೆ:

       ಹೊಟ್ಟೆ ತುಂಬ ಊಟ ಇಲ್ಲ. ಸರಿಯಾದ ಹೊತ್ತಿಗೆ ಊಟ ತಿಂಡಿ ನೀಡುತ್ತಿಲ್ಲ. ಅರೆಬೆಂದ ಅಕ್ಕಿ ಅನ್ನ . ತರಕಾರಿ ಬೇಳೆ ಇಲ್ಲದ ಸಾಂಬಾರು. ಸಮಯಕ್ಕೆ ಸರಿಯಾಗಿ ಊಟ ತಿಂಡಿ ನೀಡುತ್ತಿಲ್ಲ. ಎಷ್ಟೂ ರಾತ್ರಿ ಊಟವಿಲ್ಲದೆ ಉಪವಾಸ. ಕೆಲವು ದಿನ ರಾತ್ರಿ ಒಂದು ಗಂಟೆಯಾದರು ಊಟ ಇಲ್ಲ. ಕೊಠಡಿಯಲ್ಲಿ ವಿದ್ಯುತ್ ಇಲ್ಲ. ಕುಡಿಯಲು ಸ್ವಚ್ಚ ನೀರು ಇಲ್ಲ. ಸರ್ಕಾರ ನೀಡಿರುವ ಮೂಲ ಭೂತ ಸವಲತ್ತುಗಳು ಇಲ್ಲ. ಇದೆಲ್ಲರ ವಿರುದ್ದ ಬೇಸತ್ತು ವಿದ್ಯಾರ್ಥಿಗಳು ಬುಧವಾರ ಶಾಲೆಯ ಮುಂಭಾಗದಲ್ಲಿ ಉಪವಾಸ ಧರಣಿ ಮತ್ತು ಪ್ರತಿಭಟನೆ ಮಾಡಿದ ಅಪರೂಪದ ಘಟನೆ ನಡೆದಿದೆ. 

       ತಾಲ್ಲೂಕು ಕೇಂದ್ರದಿಂದ 5 ಕಿ.ಮೀ., ದೂರದಲ್ಲಿರುವ ಬೊಮ್ಮನಕಟ್ಟೆ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಸುಮಾರ 480 ವಿದ್ಯಾರ್ಥಿಗಳು 8ನೇ ತರಗತಿಯಿಂದ ಪಿಯುವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಸಂಸ್ಥೆಯ ಮುಖ್ಯಸ್ಥರಾದ ಪ್ರಿನ್ಸಿಪಾಲ್ ಮತ್ತು ಅಡುಗೆಯರ ವಿರುಧ್ದ ತಾವು ಅನುಭವಿಸುತ್ತಿರುವ ಇಂಚು ಕಷ್ಟ ತೊಂದರೆಗಳನ್ನು ಅಲ್ಲಿಗೆ ಭೇಟಿಕೊಟ್ಟಿದ್ದ ಶಾಸಕ ಎಂ.ಚಂದ್ರಪ್ಪ ಅವರಿಗೆ ಕಣ್ಣೀರು ಹಾಕುತ್ತಾ ವಿವರಿಸಿದರು.

         ಈ ವಿದ್ಯಾಸಂಸ್ಥೆಯಲ್ಲಿ ಅಡುಗೆಯವರ ಕಾರ್ಬಾರು ಹೆಚ್ಚು. ಅದರ ಜೊತೆಗೆ ಪ್ರಿನ್ಸಿಪಾಲ್ ಏಕ ಚಕ್ರಾಧಿಪತ್ಯ ಆಡಳಿತವನ್ನು ನಡೆಸುತ್ತಾ ಒಂದು ರೀತಿಯ ಭ್ರಷ್ಟಚಾರದ ಕೂಪವಾಗಿದೆ. ಪ್ರತಿ ಮಕ್ಕಳು ಪ್ರತಿ ನಿತ್ಯ ಅನುಭವಿಸುತ್ತಿರುವ ಯಾತನೆಯನ್ನು ಬಹಳ ದುಖ:ದಿಂದ ಶಾಸಕರೆದುರು ತಿಳಿಸಿದರು. ಬೇಜವಾಬ್ದಾರಿ, ಅಸಡ್ಡೆತನ, ಭೇದ ಭಾವ, ಇವೆಲ್ಲವು ಆಡಳಿತ ನಡೆಸುವ ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ವರ್ತನೆಗಳನ್ನು ಒಕ್ಕೂರಿಲಿನಿಂದ ವಿದ್ಯಾರ್ಥಿಗಳು ಒಂದೊಂದಾಗಿ ಬಹಿರಂಗ ಪಡಿಸಿದರು. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ತಿಂಡಿ ಇಲ್ಲ. ತರಗತಿಗಳು ಸಹ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಶಿಕ್ಷಕರ ನಡುವೆ ಒಬ್ಬರಿಗೊಬ್ಬರ ಅಸಹನೆ ದ್ವೇಶ ಅಸೂಹೆ ಅಲ್ಲಿ ಇರುವ ಬಗ್ಗೆ ಅಲ್ಲಿ ನಡೆದ ಚರ್ಚೆಯಲ್ಲಿ ಬಯಲಾಯಿತು. ಇಡೀ ಶಿಕ್ಷಕ ವರ್ಗ ಈ ಅದ್ವಾನಕ್ಕೆ ಕಾರಣ ಕರ್ತರೆ ಪ್ರಾಚಾರ್ಯರು. ಆದ್ದರಿಂದ ನಾವೆಲ್ಲ ಅಸಾಹಯಕರಾಗಿದ್ದೇವೆ ಎಂದು ಶಾಸಕರ ಮುಂದೆ ತಮ್ಮ ಅಳಿಲನ್ನು ಹಂಚಿಕೊಂಡರು.

       ಮೊರಾರ್ಜಿ ಶಾಲೆಗೆ ಸರ್ಕಾರ ಕೋಟ್ಯಾಂತ ರೂ. ಅನುದಾನವನ್ನು ಮಕ್ಕಳ ಭವಿಷ್ಯವನ್ನು ರೂಪಿಸಲು ವ್ಯವ ಮಾಡುತ್ತಿದೆ. ಆದರೆ ಇದರ ಉಪಯೋಗ ಸಮಪರ್ಕವಾಗಿ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ ಎಂಬುದನ್ನು ಈ ಘಟನೆಯಲ್ಲಿ ವೇದ್ಯವಾಗುತ್ತದೆ. ಈ ಬಗ್ಗೆ ಶಾಸಕ ಚಂದ್ರಪ್ಪ ಅವರು ಎಲ್ಲರ ವೇದನೆಗಳನ್ನು ಆಲಿಸಿ ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಸರ್ಕಾರದ ಯೋಜನೆಯಂತೆ ಈ ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸುವ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವುದಾಗಿ ತಿಳಿಸಿ ಯಾವೆದೇ ಸಮಸ್ಯೆಗಳು ಬಂದಲ್ಲಿ ತಕ್ಷಣ ನನ್ನ ದೂರವಾಣಿಗೆ ಕರೆ ಮಾಡಿ ನಿಮ್ಮ ಕುಂದು ಕೊರತೆಗಳನ್ನು ಬಗೆ ಹರಿಸುವ ಜವಾಬ್ದಾರಿ ನನ್ನದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

      ಮೊರಾರ್ಜಿ ಶಾಲೆಯಲ್ಲಿರುವ ಹೆಣ್ಣು ಮಕ್ಕಳಿಗೆ ಸ್ನಾನ ಮಾಡಲು ಬಿಸಿ ನೀರಿಲ್ಲ. ತಣ್ಣಿರು ಸಹ ಕೊರತೆ, ಬಟ್ಟೆಗಳನ್ನು ಸ್ವಚ್ಚಮಾಡಲು ನೀರಿಗಾಗಿ ದಿನ ನಿತ್ಯ ಪರದಾಟ ಹೆಣ್ಣು ಮಕ್ಕಳಿಗೆ ಸರ್ಕಾರ ನೀಡುವ ನ್ಯಾಪಕಿನ್ ಪ್ಯಾಡ್ ಗಳನ್ನು ವಿತರಣೆ ಮಾಡುತ್ತಿಲ್ಲ. ಶಾಲೆಯಲ್ಲಿ ಸಮರ್ಪಕವಾದ ಪ್ರಯೋಗ ಶಾಲೆಗಳು ಇಲ್ಲ. ಕಂಪ್ಯೂಟರ್ ಇದ್ದರು ಅವುಗಳ ಉಪಯೋಗ ಮಾಡುತ್ತಿಲ್ಲ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಶಾಸಕರ ಮುಂದೆ ಎಲ್ಲವನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಹೇಳಿದರು. ಇದನ್ನೆಲ್ಲ ಕೇಳಿದ ಶಾಸಕರು ಸಂಸ್ಥೆಯ ಪ್ರಾಚಾರ್ಯ ಮಂಜುನಾಥ್ ಅವರಿಗೆ ಸಮರ್ಪಕವಾದ ಸಲಹೆ ಸೂಚನೆಗಳನ್ನು ನೀಡಿ ತಪ್ಪಿದ್ದಲ್ಲಿ ತಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡುವುದಾಗಿ ಎಚ್ಚರಿಕೆ ನೀಡಿದರು. ಕೆಲವು ಶಿಕ್ಷಕರು ಪ್ರಾಚಾರ್ಯರ ವರ್ತನೆ ಮತ್ತು ದೌರ್ಜನ್ಯದ ಬಗ್ಗೆ ಬಿಚ್ಚು ಮನಸ್ಸಿನಿಂದ ತಮಗೆ ಆಗುತ್ತಿರುವ ಮಾನಸ ಯಾತನೆ ಬಗ್ಗೆ ವಿವರಿಸಿದರು. ಇದರಲ್ಲಿ ಕೆಲವು ಸಿಬ್ಬಂದಿಗಳನ್ನು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಊಟ ಮುಂತಾದ ಅಗತ್ಯ ಉಪಯೋಗಗಳನ್ನು ಸಮರ್ಪಕವಾಗಿ ನಿಭಾಯಿಸುವಂತೆ ಸಲಹೆ ಸೂಚನೆ ನೀಡಿದರು.

        ರಾತ್ರಿಯಿಂದ ಊಟ ಮಾಡದ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಬೆಳಗ್ಗೆ ದಿಡೀರ್ ಪ್ರತಿಭಟನೆ ನಡೆಸಿದರು. ಹಾಸ್ಟೆಲ್‍ನಲ್ಲಿ ಮಕ್ಕಳಿಗೆ ಸರಿಯಾಗಿ ಊಟ ನೀಡುವುದಿಲ್ಲ, ಅಕ್ಕಿ, ಬೇಳೆ ಪದಾರ್ಥಗಳಲ್ಲು ಹುಳುಗಳಿದ್ದು, ಊಟದಲ್ಲಿ ಸತ್ತ ಹುಳುಗಳು ಕಾಣಿಸಿಕೊಳ್ಳುತ್ತವೆ. ಶುದ್ಧ ಆಹಾರ ನೀಡುವಂತೆ ಕೇಳಿದರೆ ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಬೊಮ್ಮನಕಟ್ಟೆ ಗೇಟ್ ಇಲ್ಲವೇ ಊರ ಒಳಗೆ ಹೋಗಿ ಬಿಸ್ಕೇಟ್ ತಿಂದು ಜೀವಿಸುವಂತಾಗಿದೆ.

         ವಾಚ್‍ಮ್ಯಾನ್ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಾನೆ. ಊಟ ಕೇಳಿದರೆ ಮಕ್ಕಳಿಗೆ ದಬಾಯಿಸುತ್ತಾನೆ. ಕೆಲವೊಮ್ಮೆ ಸೌಟುವಿನಲ್ಲಿ ಹೊಡೆಯುತ್ತಾನೆ. ಭಿಕ್ಷೆ ಬೇಡೋ ರೀತಿ ಊಟಕ್ಕೆ ಬೇಡುವಂತಾಗಿದೆ. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್, ಲ್ಯಾಬ್‍ಗಳಿದ್ದಲ್ಲಿ ತಡವಾದರೆ ಊಟಕ್ಕೆ ಕತ್ತರಿ ಹಾಕುತ್ತಾರೆ. ಈ ಬಗ್ಗೆ ಪ್ರಿನ್ಸಿಪಾಲ್ ಕೇಳಿದರೆ ಅವರು ಕೂಡ ಉಡಾಫೆ ಉತ್ತರ ನೀಡುತ್ತಾರೆ. ಇಲ್ಲಿನ ಸಿಬ್ಬಂದಿ ಹಾಗೂ ಪ್ರಿನ್ಸಿಪಾಲ್ ಶಾಮಿಲ್ ಆಗಿ ಆಹಾರ ಪದಾರ್ಥಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. ಕೇಳಿದರೆ ನಮ್ಮನ್ನೆ ಹೆದರಿಸುತ್ತಾರೆ ಎಂದು ಪ್ರತಿಭಟನಾ ನಿರತ ಮಕ್ಕಳು ಆರೋಪಿಸಿದರು.

         ಘಟನೆ ನಡೆದ ಸ್ಥಳಕ್ಕೆ ಸುದ್ದಿ ತಿಳಿದು ಶಾಸಕ ಎಂ.ಚಂದ್ರಪ್ಪ ಮತ್ತು ಜಿ.ಪಂ ಮಾಜಿ ಅಧ್ಯಕ್ಷ ಎಲ್.ವಿ.ರಾಜಶೇಖರ್. ತಾಪಂ ಇಒ ಮಹಂತೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ್, ವಾಲ್ಮಿಕಿ ಸಮಾಜದ ತಾಲೂಕು ಅಧ್ಯಕ್ಷ ಸೂರೇಗೌಡ, ಮುಖಂಡ ಪೈಲ್ವಾನ್ ರಾಮಣ್ಣ, ಪಿಎಸ್‍ಐ ಮಹೇಶ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಸಮಸ್ಯೆ ಬಗೆ ಹರಿಸುವ ಬಗ್ಗೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ನಿಲ್ಲಿಸಿ ತಮ್ಮ ತಮ್ಮ ತರಗತಿಗಳಿಗೆ ಹಾಜರಾದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link