ಬೆಂಗಳೂರು
ರಾಜ್ಯದಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಕೇಂದ್ರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕರ್ನಾಟಕಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿ – 2020 ಜಾರಿ ಕುರಿತು ರಾಜ್ಯದ ವಿವಿಧ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಕುಲಾಧಿಪತಿಯೂ ಆಗಿರುವ ರಾಜ್ಯ ಪಾಲ ವಜೂಭಾಯಿ ವಾಲಾ ಸುದೀರ್ಘ ಸಮಾಲೋಚನೆ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ವ್ಯಾಪಕವಾಗಿದ್ದು, ಹಲವು ಆಯಾಮಗಳನ್ನು ಇದು ಒಳಗೊಂಡಿದೆ. ಪ್ರತಿಯೊಂದು ಕ್ಷೇತ್ರದ ಶಿಕ್ಷಣ ವ್ಯವಸ್ಥೆಯಲ್ಲೂ ನಾವೀನ್ಯತೆ ತರಲು ಇದು ಸಹಕಾರಿಯಾಗಲಿದೆ. ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ಒಳಗೊಂಡಿದ್ದು, ರಾಜ್ಯದ ಶೈಕ್ಷಣಿಕ ವಲಯದಲ್ಲಿ ಈ ನೀತಿಯಿಂದ ಗಮನಾರ್ಹ ಬದಲಾವಣೆ ತರಲು ಸಹಕಾರಿಯಾಗಲಿದೆ ಎಂದರು.
ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ, ಆರೋಗ್ಯ ವಲಯದಲ್ಲಿ ವ್ಯಾಪಕ ಸಂಶೋಧನೆ ಕೈಗೊಳ್ಳುವ ಜೊತೆಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ವಲಯದಲ್ಲಿ ಸಮಗ್ರ ಬದಲಾವಣೆಗೆ ಈ ನೀತಿ ಕಾರಣವಾಗಲಿದೆ ಎಂದರು.
ರಾಜ್ಯದಲ್ಲಿ ಶಿಕ್ಷಣ ನೀತಿ ಜಾರಿಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ನೂತನ ನೀತಿಯ ಸಾಧಕ-ಬಾಧಕಗಳ ಸಮಗ್ರ ತಿಳುವಳಿಕೆ ಅಗತ್ಯವಾಗಿದೆ ಎಂದರು.ಉನ್ನತ ಶಿಕ್ಷಣ ಇಲಾಖೆಯನ್ನು ನೋಡಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್ಥ ನಾರಾಯಣ, ರಾಜ್ಯದ 20ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಕುಲಪತಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ