ಬೆಂಗಳೂರು
ಗೃಹ ಸಚಿವ ಎಂ.ಬಿ. ಪಾಟೀಲ್ ಇಂದು ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಡಿಜಿ ಮತ್ತು ಐಜಿಪಿ ನೀಲಮಣಿ ಎಸ್. ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಮ್ಮ ನಿವಾಸಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರು ಶುಭ ಹಾರೈಸಿದರು. ನಂತರ ಅಧಿಕಾರಿಗಳ ಜೊತೆ ಔಪಚಾರಿಕ ಚರ್ಚೆ ನಡೆಸಿ ರಾತ್ರಿಯ ಹೊಸವರ್ಷ ಆಚರಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ ಅವರು ಎಲ್ಲವೂ ಸುಸೂತ್ರವಾಗಿ ನಡೆದಿದೆಯೇ? ಯಾವುದಾದರೂ ಅಹಿತಕರ ಘಟನೆ ನಡೆದಿವೆಯೇ? ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ? ಪುಂಡಾಟಿಕೆಗಳ ನಿಗ್ರಹಕ್ಕೆ ಕ್ರಮಗಳೇನು ತೆಗೆದುಕೊಂಡಿದ್ದೀರಾ? ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಪಹರೆ ಹೇಗಿತ್ತು? ಎಂದು ವಿಚಾರಿಸಿದರು.
ನಗರದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವನ್ನು ಕೊಡಬೇಡಿ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಅಹಿತಕರ ಘಟನೆ ನಡೆದಿಲ್ಲ: ನಿನ್ನೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ದುಷ್ಕರ್ಮಿಗಳು ಇಂತಹ ಅವಕಾಶ ಬಳಸಿಕೊಳ್ಳುವ ಸಂದರ್ಭ ಇರುತ್ತೆ. ಆಚರಣೆ ಶಾಂತಿಯುತವಾಗಿ ನಡೆಯಬೇಕು ಅನ್ನೋ ನಿಟ್ಟಿನಲ್ಲಿ ಸೂಕ್ತ ಭದ್ರತೆ ನೀಡಲಾಗಿದೆ. ಸಿಸಿಟಿವಿ, ಡ್ರೋನ್ ಸೇರಿದಂತೆ ಕಟ್ಟೆಚ್ಚರ ವಹಿಸಿದ್ದೆವು. ಬೆಂಗಳೂರು ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಇದೇ ಸಂದರ್ಭ ಸಚಿವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಉಸ್ತುವಾರಿ ವಿಚಾರ: ಬಿಜಾಪುರ ಜಿಲ್ಲಾ ಉಸ್ತುವಾರಿಗೆ ಬೇಡಿಕೆ ವಿಚಾರ ಪ್ರಸ್ತಾಪಿಸಿದಾಗ, ಅಂತದ್ದೇನಿಲ್ಲ, ಈಗ ಅದರ ಬಗ್ಗೆ ಮಾತುಬೇಡ ಅಂತ ಹೇಳಿ ಹೊರಟು ಹೋದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
