ಸರ್ವೆಯರ್‍ಗಳ ಪ್ರತಿನಿತ್ಯ ಕೆಲಸದ ಅಪ್ಡೆಟ್‍ಗೆ ಹೊಸ ಆ್ಯಪ್

ಬಳ್ಳಾರಿ:

   ಜಿಲ್ಲೆಯಲ್ಲಿ ಸರ್ವೆಯರ್‍ಗಳು ಪ್ರತಿನಿತ್ಯ ಕೆಲಸ ನಿರ್ವಹಿಸಿದ ನಂತರ ಅಂದು ಮಾಡಿದ ಕೆಲಸದ ಸಂಪೂರ್ಣ ವಿವರವನ್ನು ದಾಖಲಿಸುವ ಮತ್ತು ಅದನ್ನು ಮೇಲಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಸೂಕ್ತ ಸೂಚನೆ ನೀಡುವ ಹಾಗೂ ಇನ್ನೀತರ ಅಗತ್ಯ ಮಾಹಿತಿ ಒಳಗೊಂಡ ಹೊಸ ಆ್ಯಪ್‍ನ್ನು ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಅವರು ಸಿದ್ದಪಡಿಸಿದ್ದು,ಅದನ್ನು ಅ.1ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.

     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಭೂದಾಖಲೆಗಳ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸರ್ವೆಯರ್‍ಗಳು ಪ್ರತಿದಿವಸ ಏನೇನೋ ಕೆಲಸ ಮಾಡಲಾಗುತ್ತಿದೆಯೋ ಅದನ್ನು ಸಂಜೆ ಮನೆಗೆ ತೆರಳುವ ಮುಂಚೆ ಈ ಆ್ಯಪ್‍ನಲ್ಲಿ ಅಪ್‍ಡೆಟ್ ಮಾಡಿ ತೆರಳಬೇಕು. ಪ್ರತಿಯೊಬ್ಬ ಸರ್ವೆಯರ್‍ಗಳಿಗೂ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗುತ್ತದೆ. ಅದಕ್ಕೆ ಸೂಕ್ತ ಹೆಸರನ್ನು ಎರಡ್ಮೂರು ದಿನಗಳಲ್ಲಿ ನಾಮಕರಣ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದ ಸಚಿವರು, ಸರ್ವೆಯರ್‍ಗಳ ಕೆಲಸವನ್ನು ಮೇಲಾಧಿಕಾರಿಗಳು ಪ್ರತಿದಿನ ಮೇಲ್ವಿಚಾರಣೆ ಮಾಡಲಿದ್ದು, ನಿಗದಿಪಡಿಸಿದ ಗುರಿಗಿಂತ ಕಡಿಮೆ ಕೆಲಸ ಮಾಡಿದವರಿಗೆ ಇದರಿಂದ ಗೊತ್ತಾಗಲಿದೆ. ಕ್ಷೀಪ್ರಗತಿಯಿಂದ ಕೆಲಸಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಲು ಇದು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

    ಕಡ್ಡಾಯವಾಗಿ ಇದನ್ನು ಸರ್ವೆಯರ್‍ಗಳು ಅಳವಡಿಸಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಯಾವುದೇ ಕಾರಣಕ್ಕೂ ತೋರಬಾರದು ಎಂದು ಹೇಳಿದ ಅವರು ಭೂ ದಾಖಲೆ ಇಲಾಖೆಯಲ್ಲಿ 9 ಜನ ಸರ್ವೆಯರ್‍ಗಳ ಮೇಲೆ ಇಲಾಖಾವಾರು ತನಿಖೆಗೆ ಆದೇಶಿಸಿ ನೋಟಿಸ್ ನೀಡಲಾಗಿದ್ದು, ಅವರು ತಮ್ಮ ನಿಗದಿಪಡಿಸಿದ ಗುರಿ ಸಾಧಿಸಿದರೇ ತನಿಖೆಯಿಂದ ಕೈಬಿಡಲಾಗುವುದು ಎಂದರು.

     ಸರ್ವೆಯರ್‍ಗಳ ಪ್ರಕರಣಗಳು, ವಿಲೇವಾರಿ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಭೂಮಾಪನ ಪ್ರಕರಣಗಳಲ್ಲಿ ನಿಗದಿಪಡಿಸಿದ ಗುರಿ ಸಾಧಿಸಿದ 10 ಸರ್ವೆಯರ್‍ಗಳಿಗೆ ಡೆಹರಾಡೂನ್‍ನಲ್ಲಿರುವ ಸರ್ವೆ ಜನರಲ್ ಆಫ್ ಇಂಡಿಯಾ ಕಚೇರಿಯಲ್ಲಿ ತರಬೇತಿ ಕೊಡಿಸಲಾಗುವುದು ಮತ್ತು 10 ಜನ ಸರ್ವೆಯರ್‍ಗಳಿಗೆ ಲ್ಯಾಪ್‍ಟಾಪ್ ಬಹುಮಾನವಾಗಿ ನೀಡಲಾಗುವುದು ಎಂದರು.

     ಸರ್ವೆಯರ್‍ಗಳು ತಮಗೆ ನಿಗದಿಪಡಿಸಿದ ಗುರಿಯನ್ನು ಮುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿರ್ಲಕ್ಷ್ಯ ತೋರಿದರೇ ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಸೇರಿದಂತೆ ಸಹಾಯಕ ನಿರ್ದೇಶಕರುಗಳು ಮತ್ತು 61 ಜನ ಸರ್ವೆಯರ್‍ಗಳು ಪಾಲ್ಗೊಂಡಿದ್ದರು. ನಿಗದಿತ ಗುರಿ ಸಾಧಿಸಿದ ಸರ್ವೆಯರ್‍ಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂಧಿಸಿದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link