ತುಮಕೂರು:
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಭಗತ್ಸಿಂಗ್, ಸುಖ್ದೇವ್ ಮತ್ತು ರಾಜ್ಗುರು ಪ್ರಮುಖರಾಗಿದ್ದು ಅವರು ನೀಡಿದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕ್ಷಕ ನಾಗರಾಜು ತಿಳಿಸಿದರು.
ಅವರು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೈಎಫ್ಐ ಸಿದ್ದರಬೆಟ್ಟ ಘಟಕ ಕೊರಟಗೆರೆ ತಾಲೂಕು ಸಿದ್ದರಬೆಟ್ಟದಲ್ಲಿ ಆಯೋಜಿಸಿದ್ದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖ್ದೇವ್ ಹುತಾತ್ಮ ದಿಚಾರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಇಂದಿನ ಯುವಜನತೆ ಭಗತ್ ಸಿಂಗ್ ,ರಾಜ್ಗುರು, ಸುಖದೇವ್ರಂಥ ದೇಶಪ್ರೇಮಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ದೇಶದ ಐಕ್ಯತೆಗೆ ಯುವ ಜನತೆಯ ಪಾತ್ರ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.
ಡಿವೈಎಫ್ಐ ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಜಿ.ಮಂಜುನಾಥ್ ಮಾತನಾಡಿ ಹುತಾತ್ಮ ಎನ್ನುವ ಗೌರವ ಪಡೆಯುವ ಹಕ್ಕು ಕೇವಲ ಪ್ರಾಮಾಣಿಕ ದಿಟ್ಟ ಕ್ರಾಂತಿಕಾರಿಗಳಿಗೆ ಮಾತ್ರ ಇರುತ್ತದೆ. ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಪಣವಿಟ್ಟು ಬ್ರಿಟಿಷರ ವಿರುದ್ದ ಹೋರಾಡಿ ಹುತಾತ್ಮರಾದರು. ಹುತಾತ್ಮ ಎನ್ನುವ ಪಟ್ಟಕ್ಕೆ ಅರ್ಹನಾದ ಸಂಗಾತಿ ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಮತ್ತು ಸಂಗಾತಿಗಳು ಮಾತ್ರ.
ಅಸಮಾನತೆಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಿ ನವ ಸಮಸಮಾಜದ ಕನಸುಗಳನ್ನು ಭಗತ್ಸಿಂಗ್ ಮತ್ತು ಅವರ ಸಂಗಾತಿಗಳು ಒಂದು ವೇಳೆ ಸ್ವಾತಂತ್ರ್ಯದ ಕನಸು ಸಕಾರಗೊಳ್ಳುವ ಮುನ್ನವೇ ಅಮರರಾದರು. ಅವರನ್ನು ಗಲ್ಲಿಗೇರಿಸಿರಬಹುದು ಅವರ ವಿಚಾರಧಾರೆಗಳನ್ನು ನಾಶಮಾಡಲು ಆಗುವುದಿಲ್ಲ ಎಂದು ಹೇಳಿದರು.
ಡಿವೈಎಫ್ಐ ಕೊರಟಗೆರೆ ತಾಲೂಕು ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಭಗತ್ಸಿಂಗ್, ರಾಜ್ಗುರು ಸುಖ್ದೇವ್ರವರು ಬ್ರಿಟಿಷರ ವಿರುದ್ದ ಹೋರಾಡುವ ಮೂಲಕ ತಮ್ಮ ಚಿಕ್ಕ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಇಂದು ಯಾವ ಉದ್ದೇಶದಿಂದ ಅವರು ಪ್ರಾಣತ್ಯಾಗ ಮಾಡಿದರೋ ಆ ಕನಸುಗಳನ್ನು ನನಸು ಮಾಡುವ ಬದಲು ವ್ಯವಸ್ಥೆ ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಇಂದು ಗ್ರಾಮೀಣ ಪ್ರದೇಶದಲ್ಲಿ ಯುವಜನರು ಉದ್ಯೋಗಗಳಿಲ್ಲದೆ ವ್ಯವಸಾಯವೂ ಇಲ್ಲದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಭಗತ್ಸಿಂಗ್ ಆದರ್ಶಗಳನ್ನು ಇಟ್ಟುಕೊಂಡಿರುವ ಡಿವೈಎಫ್ಐ ಸಂಘಟನೆಯ ಸದಸ್ಯತ್ವವನ್ನು ಪಡೆಯುವ ಮೂಲಕ ಯುವಜನರು ಈ ಮೂವರು ದೇಶಾಭಿಮಾನಿಗಳ ಆಶಯಗಳನ್ನು ಈಡೇರಿಸಲು ಮುನ್ನಡೆಯಬೇಕು ಎಂದರು.ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಎಂ.ಆರ್.ನಾಗರಾಜ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ಗುಂಪುಗಳಿದ್ದವು.
ಅವುಗಳಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಕೆಲಸ ನಿರ್ವಹಿಸಿದರು. ತೀವ್ರಗಾಮಿ ಗುಂಪಿನಲ್ಲಿದ್ದ ಭಗತ್ ಸಿಂಗ್ ಮೊದಲಾದವರು ಕ್ರಾಂತಿಯಿಂದಲೇ ಬದಲಾವಣೆ ಸಾಧ್ಯ ಎಂಬುದನ್ನು ಸಾರಿದರು. ನೇಣುಗಂಭ ಏರಬೇಕಾದರೂ ಸಹ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ದ ಘೋಷಣೆಯನ್ನು ಕೂಗುವ ಮೂಲಕ ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗಿ ನಗುನಗುತ್ತಲೇ ಹುತಾತ್ಮರಾದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಡಿವೈಎಫ್ಐ ಹನುಮಂತರಾಜು ಉಪಸ್ಥಿತರಿದ್ದರು. ನಟರಾಜ್ ಸ್ವಾಗತಿಸಿದರು. ಮಾರುತಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








