ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಕಾರ್ಯ ಶ್ಲಾಘನೀಯ

ತುರುವೇಕೆರೆ

         ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಇಂತಹ ನಾಟಕಗಳನ್ನು ಇನ್ನೂ ಜೀವಂತವಾಗಿಡುವಲ್ಲಿ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದು ಸಾಹಿತಿ ತುರುವೇಕೆರೆ ಪ್ರಸಾದ್ ತಿಳಿಸಿದರು.

         ಪಟ್ಟಣದ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತಾಲ್ಲೂಕು ವೀರಶೈವ ತರಳಬಾಳು ಸಮಿತಿ ಹಾಗೂ ಸಹಕಾರಿ ನೌಕರರ ಸಂಘ ಇವುಗಳ ಸಹಯೋಗದಲ್ಲಿ ಸಾಣೇನಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ವತಿಯಿಂದ ಬುಧವಾರದಿಂದ ಶುಕ್ರವಾರದವರೆಗೆ ನಡೆಯಲಿರುವ 3 ದಿನಗಳ ಶಿವಸಂಚಾರ ನಾಟಕೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆ ಜೊತೆಯಲ್ಲಿ ಕಲೆಯನ್ನೂ ಅವರಲ್ಲಿ ರೂಢಿಸಿ ರಾಜ್ಯಾದ್ಯಂತ ಉಚಿತವಾಗಿ ಯವುದೇ ಫಲಾಪೇಕ್ಷೆಯಿಲ್ಲದೆ ಉತ್ತಮ ಪ್ರದರ್ಶನ ನೀಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಇಂತಹ ನಾಟಕಗಳನ್ನು ಇನ್ನೂ ಜೀವಂತವಾಗಿಡುವಲ್ಲಿ ಮಠಮಾನ್ಯಗಳು ಶ್ರಮಿಸುತ್ತಿವೆ.

        ಇವರ ಪ್ರತಿಭೆ ನಿಜಕ್ಕೂ ಅಮೋಘವಾದುದು. ನಾಟಕಗಳ ರೂಪದಲ್ಲಿ ಸಮಾಜವನ್ನು ತಿದ್ದುವಂತ ಕಾರ್ಯ ಇದಾಗಿದ್ದು ಹೆಚ್ಚು ಹೆಚ್ಚು ಸಾಹಿತ್ಯಾಸಕ್ತರು ನಮ್ಮ ತಾಲ್ಲೂಕಿನಲ್ಲಿ ಮೂರು ದಿನ ನಡೆಯುವ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ಮಕ್ಕಳಿಗೆ ಸ್ಪೂರ್ತಿ ನೀಡುವಂತೆ ಕರೆ ನೀಡಿದರು.

       ತಾ.ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಮ್.ಕುಮಾರಸ್ವಾಮಿ, ಕ.ಸಾ.ಪ.ಮಾಜಿ ಅಧ್ಯಕ್ಷ ಸಾ.ಶಿ.ದೇವರಾಜು, ನೀನಾಸಂ ಶ್ರೀನಿವಾಸ್ ಕಾರ್ಯಕ್ರಮ ಕುರಿತಂತೆ ಮಾತನಾಡಿದರು.

       ಡೋಲು ಬಾರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಮೊದಲ ಪ್ರದರ್ಶನ “ಗುರು ಮಾತೆ ಅಕ್ಕ ನಾಗಲಾಂಬಿಕೆ” ನಾಟಕವನ್ನು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರು.

         ರೋಟರಿ ಅಧ್ಯಕ್ಷ ಡಾ.ಚೇತನ್, ಬಿ.ಎಮ್.ಎಸ್ ಉಮೇಶ್, ಗ್ಯಾಷ್ ಪ್ರಭು, ಪಟೇಲ್ ಚಂದ್ರು, ಮಲ್ಲಿಕಾರ್ಜುನ ದುಂಡ, ಲೋಕಣ್ಣ, ಕಲ್ಲೇಶ್, ಮಂಜುನಾಥ್, ಅಕ್ಕನ ಬಳಗದ ದೇವಮ್ಮ, ಶಿವಾನಂದ್, ನಟರಾಜು ಸೇರಿದಂತೆ ಅನೇಕ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಸಂಚಾಲಕ ಸುನಿಲ್‍ಬಾಬು ಕಾರ್ಯಕ್ರಮ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap