ಲಂಚಕ್ಕೆಬೇಡಿಕೆ ಇಟ್ಟರೆ ಹುಷಾರ್ …!

ಗುಬ್ಬಿ

     ಶಾಸಕರು ಲಂಚಕ್ಕೆ ಬೇಡಿಕೆ ಇಟ್ಟಿರುವ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿರುವುದು ಸರಿ ಇದೆ. ಆದರೆ ಬಿಜೆಪಿ ಮುಖಂಡರು ಇಂತಹ ಅಧಿಕಾರಿಗಳ ಪರ ವಕಾಲತ್ತು ವಹಿಸುವುದು ವಿಪರ್ಯಾಸ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ ತಿಳಿಸಿದರು.

       ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಕರ್ತವ್ಯ ಮಾಡಿರುವ ಶಾಸಕರು, ಪ್ರಚಾರದ ಗೀಳಿಗೆ ಎಂದೂ ಹೇಳಿಕೆಗಳನ್ನು ನೀಡಿದವರಲ್ಲ. ಶಾಸಕರು ಸತತ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃಧ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

      ಕ್ಷೇತ್ರದಲ್ಲಿ ಕೆಲಸ ಮಾಡದೆ ಜನರು ಮತ ನೀಡುತ್ತಾರೆಯೆ ಎಂದು ಪ್ರಶ್ನಿಸಿದ ಅವರು, ಕೊರೋನಾದಿಂದ ಇಡೀ ಜಿಲ್ಲೆಯೇ ಆತಂಕದಲ್ಲಿದೆ. ಸಂಸದರು ಮನೆ ಬಿಟ್ಟು ಹೊರ ಬಂದು ಜನರಿಗೆ ಧೈರ್ಯ ತುಂಬಿದ ಉದಾಹರಣೆಗಳೇನಾದರೂ ಇದ್ದರೆ ಸ್ಪಷ್ಟ ಪಡಿಸಲಿ. ಅವರು ಸೀಲ್‍ಡೌನ್ ಏರಿಯಾದಲ್ಲಿ ಬಡ ಕುಟುಂಬಗಳಿಗೆ ಸಹಾಯ ಮಾಡಿದ ನಿದರ್ಶನವೂ ಇಲ್ಲ.

      ಜತೆಗೆ ಪಟ್ಟಣ ಪಂಚಾಯಿತಿ ಅವ್ಯವಹಾರದ ಬಗ್ಗೆ ಮಾತನಾಡುವ ಬೆಟ್ಟಸ್ವಾಮಿ ಅವರು, ಶಾಸಕರೊಟ್ಟಿಗೆ 10 ವರ್ಷ ಪಪಂ ಸದಸ್ಯ ಹಾಗೂ ಅಧ್ಯಕ್ಷರಾಗಿ ಮಾಡಿದ್ದೇನು? ಅವರ ಅಧಿಕಾರಾವದಿಯಲ್ಲಿ ಭ್ರಷ್ಟಾಚಾರ ಅವರಿಂದಲೆ ಆಗಿರಬೇಕಲ್ಲವೆ ಎಂದು ಕುಟುಕಿದರು. ವಿನಾಕಾರಣ ಸಲ್ಲದ ಹೇಳಿಕೆ ನೀಡುತ್ತಾ ಕೆಸರೆರಚಾಟ ಬಿಟ್ಟು ಸಾರ್ವಜನಿಕರ ಕೆಲಸ ಮಾಡಿ. ಸಂಸದರನ್ನು ಬೆಂಬಲಿಸಿದರೆ ಗಣಿಗಾರಿಕೆ ಸುಗಮವಾಗಿ ನಡೆಯುವುದೆಂಬ ಉದ್ದೇಶದಲ್ಲಿ ಶಾಸಕರ ವಿರುದ್ದ ಸಲ್ಲದ ಹೇಳಿಕೆ ನೀಡುವ ಬಿಜೆಪಿ ಮುಖಂಡರು, ತಮ್ಮದೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ ವಿಶೇಷ ಅನುದಾನ ತಂದು ಅಭಿವೃದ್ದಿ ಕೆಲಸ ಮಾಡಿದ್ದೀರಿ ತಿಳಿಸಿ ಎಂದು ಸವಾಲೆಸೆದರು.

    ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್ ಮಾತನಾಡಿ, ಈ ಹಿಂದೆ ಎಸಿಬಿ ಬಲೆಗೆ ಬಿದ್ದು ಶಿಕ್ಷೆ ಅನುಭವಿಸಿದ ತಹಸೀಲ್ದಾರ್ ಅವರು ಮತ್ತೊಮ್ಮೆ ಪದೋನ್ನತಿಯೊಂದಿಗೆ ಗುಬ್ಬಿಗೆ ಗ್ರೇಡ್ 1 ತಹಸೀಲ್ದಾರ್ ಆಗಿ ನೇಮಕವಾಗಿರುವುದೆ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ದಕ್ಷ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಭ್ರಷ್ಟಾಚಾರ ಸಾಬೀತಾದ ಅಧಿಕಾರಿಗಳನ್ನು ಗುಬ್ಬಿ ತಾಲ್ಲೂಕಿಗೆ ತರುವ ಉದ್ದೇಶವಾದರೂ ಏನು ಎಂದು ಕಟುವಾಗಿ ಪ್ರಶ್ನಿಸಿದ ಅವರು, ಇಂತಹ ಅಧಿಕಾರಿಗಳ ಪರ ಹೇಳಿಕೆ ನೀಡಲು ಬಿಜೆಪಿ ಮುಖಂಡರು ಮುಂದಾಗುವುದು ವಿಪರ್ಯಾಸ ಎಂದು ಕುಟುಕಿದರು.

   ಪಟ್ಟಣ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಜಿ.ಸಿ.ನರಸಿಂಹಮೂರ್ತಿ ಮಾತನಾಡಿ, ಜಾತೀಯತೆ ಎತ್ತಿ ಹಿಡಿದ ಬಿಜೆಪಿ ಮುಖಂಡರೊಬ್ಬರು ದಲಿತ ವಿರೋಧವನ್ನು ಈ ಹಿಂದೆ ತೋರಿದ್ದಾರೆ. ದಲಿತ ಮುಖಂಡನೊಂದಿಗೆ ಅನುಚಿತವಾಗಿ ವರ್ತಿಸಿದ ಉದಾಹರಣೆ ಇದೆ. ಈ ಹಿಂದೆ ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಅವರೆ ಬಿಡಿಸಿಕೊಂಡು ಬಂದಿದ್ದನ್ನು ಮರೆತಿದ್ದಾರೆ. ಇವರ ಹೇಳಿಕೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ವರ್ಗಾವಣೆ ಮಾಡುವ ಸರ್ಕಾರದ ನಡವಳಿಕೆ ಕೂಡ ಅನುಮಾನಕ್ಕೆ ಕಾರಣವಾಗಿದೆ. ಲೂಟಿ ಹಣದಲ್ಲೆ ಶಾಸಕನಾಗುವ ಕನಸು ಕಾಣುತ್ತಿರುವ ಬಿಜೆಪಿಯ ಸ್ಥಳೀಯ ಮುಖಂಡರ ಮುಖಭಂಗಕ್ಕೆ ತಯಾರಿ ನಡೆಸಿದ ಬಿಜೆಪಿ ವರಿಷ್ಠರು, ಬೆಂಗಳೂರಿನ ಬಲಿಷ್ಠ ನಾಯಕ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರನ್ನು ಗುಬ್ಬಿಗೆ ಕರೆ ತರಲು ಮುಂದಾಗಿರುವುದು ಸ್ಥಳೀಯ ಬಿಜೆಪಿ ಮುಖಂಡರ ಸ್ಥಿತಿಗತಿಯನ್ನು ಎತ್ತಿ ತೋರುತ್ತಿದೆ ಎಂದು ತಿಳಿಸಿದರು.

  ಪಟ್ಟಣ ಪಂಚಾಯ್ತಿ ಸದಸ್ಯ ಕುಮಾರ್ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಬೋರ್‍ವೆಲ್ ಏಜೆನ್ಸಿ ಅವರಿಂದ ಲೂಟಿ ಹೊಡೆದವರು ಯಾರು ಎಂಬುದು ಜನತೆಗೆ ತಿಳಿಯಬೇಕಿದೆ. ಮತ್ತೊಬ್ಬರ ಸ್ಥಳದಲ್ಲಿ ದೊಡ್ಡ ಮನೆ ಕಟ್ಟಿಕೊಂಡ ಬಿಜೆಪಿ ಪಪಂ ಸದಸ್ಯ, ಸಂಸದರನ್ನು ಬಳಸಿಕೊಂಡು ಸಾರ್ವಜನಿಕರಿಂದ ಹೇಗೆಲ್ಲಾ ಲೂಟಿ ಮಾಡಿದ್ದಾರೆ ಎಂಬುದೂ ತಿಳಿದಿದೆ. ಮುಖ್ಯಾಧಿಕಾರಿ ಭೂ ಪರಿವರ್ತನೆ ವಿಚಾರದಲ್ಲಿ ಲಂಚ ಕೇಳಿದ್ದು ನನ್ನ ಮುಂದೆಯೆ ನಡೆದ ಘಟನೆಯಾಗಿದೆ. ಇಂತಹ ಅಧಿಕಾರಿಗಳನ್ನು ಓಲೈಸುವ ಬಿಜೆಪಿ ಸದಸ್ಯರು ಪಂಥಾಹ್ವಾನ ನೀಡುವುದು ಹಾಸ್ಯಾಸ್ಪದ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ರೇಣುಕಾಪ್ರಸಾದ್, ಎಪಿಎಂಸಿ ಸದಸ್ಯ ಲೋಕೇಶ್ಚರ್, ಮುಖಂಡರಾದ ಕೊಡಿಯಾಲ ಮಹದೇವ್, ಸಿದ್ದರಾಜು, ಹೊಸಕೆರೆ ಬಾಬು, ರಾಜಣ್ಣ, ಧಾಮು, ಕಾರ್ತಿಕೇಯನ್, ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link