ಪಶು ಚಿಕಿತ್ಸಾ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ

ಹೊನ್ನಾಳಿ:

       ತಮ್ಮ ಸಂಸತ್ ಸದಸ್ಯತ್ವದ ಅವಧಿಯಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳ ಅಭಿವೃದ್ಧಿಗೆ ಪ್ರಾಮಾಣಿವಾಗಿ ಶ್ರಮಿಸಿರುವುದಾಗಿ ಸಂಸದ ಜಿ.ಎಂ. ಸಿದ್ಧೇಶ್ವರ್ ಹೇಳಿದರು

       ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಮಂಗಳವಾರ 25.60ಲಕ್ಷ ರೂ.ಗಳ ವೆಚ್ಚದ ಪಶು ಚಿಕಿತ್ಸಾ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

      ತಾವು ಮತ್ತು ಶಾಸಕ ಎಂ.ಪಿ. ರೇಣುಕಾಚಾರ್ಯ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಿರುವುದಾಗಿ ಭರವಸೆ ನೀಡಿದರು.

      ದೇಶದ ಸಮಗ್ರ ಅಭಿವೃದ್ಧಿಗೆ ಹಾಗೂ ದೇಶದ ಭದ್ರತೆಗೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಬೇಕು. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ದೇಶ-ವಿದೇಶಗಳೂ ಮೆಚ್ಚುವಂಥ ಆಡಳಿತ ನಡೆಸಿ ವಿಶ್ವಕ್ಕೆ ಮಾದರಿ ನಾಯಕ ಎಂದು ನಾಮಾಂಕಿತವಾಗಿರುವ ನರೇಂದ್ರ ಮೋದಿ ಅವರು ಜನಮಾನಸದಲ್ಲಿ ಬೇರೂರಿದ್ದಾರೆ ಎಂದು ಹೇಳಿದರು.

       ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಮೇಲೆ ಕಡು ಬಡವರು ಮತ್ತು ಹಿಂದುಳಿದವರು ಬ್ಯಾಂಕ್ ಖಾತೆಗಳನ್ನು ತೆರೆಯುವಂತಾಯಿತು. ರೈತರಿಗೆ ಅನುಕೂಲವಾಗುವಂಥ ಫಸಲ್ ಬೀಮಾ ಯೋಜನೆ, ಸಾಮಾನ್ಯ ಜನರಿಗೆ ವಿಮಾ ಯೋಜನೆ, ರೈತ ಬೆಳೆದ ಬಹುತೇಕ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಿರುವುದೂ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ವಿವರಿಸಿದರು.

       ವಿರೋಧ ಪಕ್ಷದವರು ಟೀಕೆಗೋಸ್ಕರ ಟೀಕೆ ಮಾಡುತ್ತಿದ್ದಾರೆ. ಟೀಕಾಕಾರರಿಗೆ ಯಾವತ್ತೂ ಪ್ರಧಾನಿಯವರು ಉತ್ತರ ಕೊಡಲು ಹೋಗದೇ ಅಭಿವೃದ್ಧಿಯೇ ಮೂಲಮಂತ್ರ ಎಂದು ತಿಳಿದುಕೊಂಡು ಪ್ರಾಮಾಣಿವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

         ದೇಶದಲ್ಲಿ ನಕ್ಸಲರು, ಭಯೋತ್ಪಾದಕರನ್ನು ನಿಗ್ರಹಿಸಲು ನರೇಂದ್ರ ಮೋದಿ ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಪ್ರಧಾನಿ ಜೀವಕ್ಕೆ ಕುತ್ತು ತರುವ ಕುತಂತ್ರ ನಡೆಯುತ್ತಿದೆ. ದೇವರ ದಯೆಯಿಂದ ಹಾಗೂ ಜನರ ಆಶೀರ್ವಾದದಿಂದ ಪ್ರಧಾನಿಯವರಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಿಳಿಸಿದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ತಾಲೂಕಿನ ಕುಂಬಳೂರು ಹಾಗೂ ಹರಳಹಳ್ಳಿ ಗ್ರಾಮಗಳಲ್ಲಿ ಪಶು ಪಶು ಚಿಕಿತ್ಸಾ ಕೇಂದ್ರದ ಕಟ್ಟಡಗಳು ಇರಲಿಲ್ಲ. ತಲಾ 25.60ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಳಿಸಿ ಕಟ್ಟಡಗಳ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.

         ತುಂಗಾ ಎಡ ದಂಡೆ ನಾಲಾ ಆಧುನೀಕರಣಕ್ಕೆ 343 ಕೋಟಿ ರೂ.ಗಳ ಅನುದಾನವನ್ನು ಕೇಂದ್ರದಿಂದ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಿಸಲು ತಾವು ಮತ್ತು ಸಂಸದ ಜಿ.ಎಂ. ಸಿದ್ಧೇಶ್ವರ್ ಅವರು ಶ್ರಮ ವಹಿಸಿದ್ದೆವು ಎಂದರು.

        ಪಶು ವೈದ್ಯಾಧಿಕಾರಿ ಡಾ.ಶಿವಪ್ಪ ಹುಲಿಕೇರಿ, ತಾಪಂ ಅಧ್ಯಕ್ಷೆ ಸುಲೋಚನಮ್ಮ ಫಾಲಾಕ್ಷಪ್ಪ, ಉಪಾಧ್ಯಕ್ಷ ಪಿ.ಎಸ್. ರವಿಕುಮಾರ್, ಗ್ರಾಪಂ ಅಧ್ಯಕ್ಷ ಒ.ಎಸ್. ವೆಂಕಟೇಶಪ್ಪ, ಸದಸ್ಯ ಹನುಮಂತಪ್ಪ, ಹೊನ್ನಾಳಿ ಕಸಬಾ ಸೊಸೈಟಿ ಅಧ್ಯಕ್ಷ ಎಚ್.ಬಿ. ಮೋಹನ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link