ತುರುವೇಕೆರೆ
ಪಟ್ಟಣದ ಜಿಜೆಸಿ ಕ್ರೀಡಾಂಗಣದಲ್ಲಿ ಮಳೆ ನೀರು ನಿಂತು ಅವ್ಯವಸ್ಥೆಗೊಂಡಿದ್ದರಿಂದ ನೂರಾರು ವಾಯು ವಿಹಾರಿಗಳು, ಮುಂಜಾನೆ ಗೆಳೆಯರ ಬಳಗದ ಸದಸ್ಯರು ಸೋಮವಾರ ಕ್ರೀಡಾಂಗಣದಲ್ಲಿ ನಿಂತ ನೀರಲ್ಲಿಳಿದು ಪ್ರತಿಭಟಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಇರುವ ಏಕೈಕ ಕ್ರೀಡಾಂಗಣ ಇದಾಗಿದ್ದು, ಪ್ರತಿದಿನ ಮುಂಜಾನೆ ಹಾಗೂ ಸಂಜೆ ನೂರಾರು ನಾಗರಿಕರು ವಾಯು ವಿಹಾರಕ್ಕೆಂದು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಕ್ರೀಡಾಂಗಣದೊಳಗೆ ಬಿದ್ದ ಮಳೆ ನೀರು ಆಚೆ ಹೋಗಲು ವ್ಯವಸ್ಥೆಯಿಲ್ಲದ ಕಾರಣ ಕ್ರೀಡಾಂಗಣವು ನೀರಿನಿಂದ ಆವೃತವಾಗಿರುತ್ತದೆ. ಒಳಭಾಗದ ಮೈದಾನದ ನೀರು ಹೊರಹೋಗಲು ಆಸ್ಪದವಿಲ್ಲದ ಕಾರಣ, ಕ್ರೀಡಾಂಗಣದೊಳಗೆ ನಿಂತು ಸಣ್ಣ ಸಣ್ಣ ಕಟ್ಟೆಗಳಾಗಿ ಮಾರ್ಪಾಟಾಗಿವೆ.
ಪ್ರತಿದಿನ ಹಿರಿಯ ಹಾಗೂ ಕಿರಿಯ ಎಲ್ಲಾ ವಯಸ್ಸಿನ ನೂರಾರು ನಾಗರಿಕರು ಪ್ರತಿ ದಿನ ಬೆಳಿಗ್ಗೆ ಇಲ್ಲಿಗೆ ವಾಯು ವಿಹಾರಕ್ಕೆ ಬರುತ್ತಿದ್ದು, ಇದರ ಅವ್ಯವಸ್ಥೆ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ. ಇಲ್ಲಿ ಪ್ರತಿದಿನ ಕ್ರಿಕೆಟ್, ಕಬಡ್ಡಿ, ಓಡುವುದು, ಕುದುರೆ ಸವಾರಿ, ಯೋಗಾಭ್ಯಾಸ ಸೇರಿದಂತೆ ಅನೇಕ ತರಬೇತಿ ಚಟುವಟಿಕೆಗಳು ನಡೆಯುತ್ತಿರುತ್ತವೆ. ಕ್ರೀಡಾಂಗಣದೊಳಗಿನ ಕಾಮಗಾರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಅನೇಕ ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಸಹ ಇತ್ತ ಯಾರೂ ಗಮನ ಹರಿಸದಿರುವುದು ಸೋಜಿಗದ ಸಂಗತಿ.
ಈ ಹಿಂದೆ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ತಾಲ್ಲೂಕು ಆಡಳಿತ ಇದೇ ಕ್ರೀಡಾಂಗಣದಲ್ಲಿ ಆಚರಣೆ ಮಾಡುತ್ತಿದ್ದು, ಟ್ರ್ಯಾಕ್‍ಲೈನ್ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಗುರುಭವನ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಇನ್ನೂ ಕಾಮಗಾರಿ ಅಪೂರ್ಣ ಗೊಂಡಿರುವುದರಿಂದ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಕ್ರೀಡಾಂಗಣದಲ್ಲಿ ನಡೆಯುವುದು ಅನುಮಾನವಾಗಿದೆ. ಇನ್ನಾದರೂ ಸಂಬಂಧ ಪಟ್ಟವರು ಕೂಡಲೆ ಇತ್ತ ಗಮನ ಹರಿಸಿ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಹಾಗೂ ವಾಯುವಿಹಾರಿಗಳಿಗೆ ಅನುವು ಮಾಡಿಕೊಡಲಿ. ಇಲ್ಲದಿದ್ದಲ್ಲಿ ಸಾವಿರಾರು ನಾಗರಿಕರೊಂದಿಗೆ ಕ್ರೀಡಾಂಗಣ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಮುಂಜಾನೆ ಗೆಳೆಯರ ಬಳಗ ಎಚ್ಚರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ