ತುಮಕೂರು
ಶುಕ್ರವಾರ ಹೊಸದಾಗಿ 112 ಜನರಿಗೆ ಕೊರೊನಾ ಸೋಂಕು ಖಚಿತವಾದ ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3978ಕ್ಕೆ ಏರಿಕೆಯಾಗಿದೆ. ಮತ್ತೆ ಆರು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ತುಮಕೂರಿನ ಎಸ್‍ಐಟಿ ಬಡಾವಣೆಯ 78 ವರ್ಷದ ಮಹಿಳೆ ಸೋಂಕು ತಗುಲಿ ಅಸುನೀಗಿದ್ದಾರೆ. ಇವರು ಜ್ವರ, ಕೆಮ್ಮಿನ ತೊಂದರೆಯಿಂದ ಬಳಲುತ್ತಿದ್ದರು. ಗಂಟಲು ದ್ರವ ಪರೀಕ್ಷೆ ಮಾಡಿದಾಗ ಪಾಸಿಟೀವ್ ವರದಿ ಬಂದಿತ್ತು.
ನಗರದ ಪಿ.ಹೆಚ್.ಕಾಲೋನಿಯ 66 ವರ್ಷದ ಗಂಡಸು ಹಾಗೂ ಇದೇ ಬಡಾವಣೆಯ 60 ವರ್ಷದ ಮಹಿಳೆ ಕೋವಿಡ್‍ಗೆ ಬಲಿಯಾಗಿದ್ದಾರೆ. ಅಲ್ಲದೆ, ಶಾರದಾದೇವಿ ನಗರದ 72 ವರ್ಷದ ಪುರುಷ ಹಾಗೂ ಕ್ಯಾತ್ಸಂದ್ರದ 67 ವರ್ಷದ ಪುರುಷ ಸಾವಿಗೀಡಾಗಿದ್ದಾರೆ.
ಕುಣಿಗಲ್ ತಾಲ್ಲೂಕಿನ ನಾಗಸಂದ್ರ ಎಡ್ಡಿಗೆರೆಯ 58 ವರ್ಷದ ಗಂಡಸು ಕೊರೊನಾ ಸೋಂಕು ತಗುಲಿ ಮೃತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತರಾದವರ ಸಂಖ್ಯೆ 125ಕ್ಕೆ ಏರಿದೆ. ಇವರಲ್ಲಿ ತುಮಕೂರು ತಾಲ್ಲೂಕಿನ 82 ಜನ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಶುಕ್ರವಾರ ವರದಿಯಾದ 112 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 48, ತಿಪಟೂರು ತಾಲ್ಲೂಕಿನ 13, ಮಧುಗಿರಿ ತಾಲ್ಲೂಕಿನ 12, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 11, ಗುಬ್ಬಿ ತಾಲ್ಲೂಕಿನಲ್ಲಿ 10, ಪಾವಗಡ ತಾಲ್ಲೂಕಿನಲ್ಲಿ 7, ತುರುವೇಕೆರೆ ತಾಲ್ಲೂಕಿನಲ್ಲಿ 7, ಕುಣಿಗಲ್ ತಾಲ್ಲೂಕಿನಲ್ಲಿ 3, ಶಿರಾ ತಾಲ್ಲೂಕಿನ ಒಬ್ಬರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 67 ಪುರುಷರು, 45 ಮಹಿಳೆಯರು, 3 ಜನ ಮಕ್ಕಳು, 60 ವರ್ಷ ಮೇಲ್ಪಟ್ಟ 24 ಜನರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 3978 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 1528, ಕುಣಿಗಲ್ ತಾ. 393, ಪಾವಗಡ ತಾ. 332, ತಿಪಟೂರು ತಾ. 301, ಶಿರಾ ತಾ. 273, ಕೊರಟಗೆರೆ ತಾ. 227 ಮಧುಗಿರಿ ತಾ. 264, ಗುಬ್ಬಿ ತಾ. 240, ತುರುವೇಕೆರೆ ತಾ. 227, ಚಿಕ್ಕನಾಯಕನಹಳ್ಳಿ ತಾ. 193 ಪ್ರಕರಣ ವರದಿಯಾಗಿವೆ. ಈವರೆಗೂ ಕೊರೊನಾ ಸೋಂಕು ತಗುಲಿದ 3978 ಜನರಲ್ಲಿ 125 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 82, ಕುಣಿಗಲ್ ತಾಲ್ಲೂಕಿನಲ್ಲಿ 9, ತಿಪಟೂರು ತಾಲ್ಲೂಕಿನ 6, ಪಾವಗಡ ತಾಲ್ಲೂಕಿನಲ್ಲಿ 6, ಶಿರಾ ತಾಲ್ಲೂಕಿನ 6, ಗುಬ್ಬಿ ತಾಲ್ಲೂಕಿನಲ್ಲಿ 6, ಮಧುಗಿರಿ ತಾಲ್ಲೂಕಿನಲ್ಲಿ 3, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 3, ತುರುವೇಕೆರೆ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ತಲಾ ಇಬ್ಬರು ಕೋವಿಡ್‍ಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಶುಕ್ರವಾರ ಗುಣಮುಖರಾಗಿ ಆಸ್ಪತ್ರೆಯಿಂದ 136 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 2903 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 950 ಸೋಂಕು ಸಕ್ರಿಯ ಪ್ರಕರಣಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ