ಅನಗತ್ಯ ಸುತ್ತಾಡುತ್ತಿದ್ದ 125ಕ್ಕೂ ಹೆಚ್ಚು ಜನರ ಬಂಧನ

ದಾವಣಗೆರೆ:

    ಕೊರೊನಾ ವೈರಸ್ ನಿಯಂತ್ರಣ ಕ್ರಮವಾಗಿ ಲಾಕ್‍ಡೌನ್ ಘೋಷಣೆ ಘೋಷಿಸಿದ್ದರೂ ಹಾಗೂ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಅನಗತ್ಯವಾಗಿ ಬೀದಿಗಿಳಿದ ಮಹಿಳೆಯರು ಸೇರಿದಂತೆ 125ಕ್ಕೂ ಹೆಚ್ಚು ಜನರನ್ನು ನಗರದ ವಿವಿಧೆಡೆ ಪೊಲೀಸರು ಬಂಧಿಸಿ, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳ್ಳಂ ಬೆಳಿಗ್ಗೆ ನಗರದಲ್ಲಿ ಗಸ್ತು ತಿರುಗಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಿಲ್ಲಾಡಳಿತದಿಂದ ನೀಡಿರುವ ಪಾಸ್ ಇಲ್ಲದೆಯೇ ಅನಗತ್ಯವಾಗಿ ರಸ್ತೆಯಲ್ಲಿ ತೀರುಗುತ್ತಿದ್ದ 125ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆ ತಂದು ಕೋವಿಡ್-19ರ ಲಾಕ್‍ಡೌನ್ ಉಲ್ಲಂಘಿಸಿರುವುದಕ್ಕೆ ನನ್ನನ್ನು ಕ್ಷಮಿಸಿ ಎಂಬ ಫಲಕ ಕೈಗೆ ನೀಡಿ, ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಬೀದಿಯಲ್ಲಿ ತಿರುಗದೆ, ಮನೆಯಲ್ಲಿ ಇದ್ದು ಲಾಕ್‍ಡೌನ್ ನಿಯಮ ಪಾಲಿಸುವಂತೆ ತಾಕೀತು ಮಾಡಿ ಬಿಡುಗಡೆ ಗೊಳಿಸಿದರು.

     ಲಾಕ್‍ಡೌನ್ ಮಧ್ಯೆಯೂ ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ, ಕಾರು, ಆಟೋ, ಲಾರಿ ಸೇರಿದಂತೆ 3500ಕ್ಕೂ ಹೆಚ್ಚು ವಾಹನಗಳನ್ನು ಕಳೆದ ಕೆಲ ದಿನಗಳಿಂದ ಜಪ್ತು ಮಾಡಿದ್ದ ಪೊಲೀಸರು ಈಗ ವಾಹನಗಳ ಜಪ್ತು ಮಾಡುವುದರ ಜೊತೆಗೆ ಜನರನ್ನು ಬಂಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ.

    ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗುಂಪು ಸೇರಿದ್ದವರು, ವಿನಾಕಾರಣ ಸುತ್ತಾಡುತ್ತಿದ್ದವರು, ಮೈದಾನ, ಪಾರ್ಕ್, ಕಟ್ಟೆ, ಕಟ್ಟಡಗಳ ಹಿಂಭಾಗ, ಸಂದಿಗೊಂದಿಯಲ್ಲಿ ಕುಳಿತಿದ್ದವರನ್ನು ಪೊಲೀಸರು ಹುಡುಕಿ ಹುಡುಕಿ, ಕೊರಳ ಪಟ್ಟಿಗೆ ಕೈ ಹಾಕಿ ತಮ್ಮ ವಶಕ್ಕೆ ಪಡೆದಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯ ದುರ್ಗಾ ಪಡೆ ಸಹ ಕಾರ್ಯಾಚರಣೆಗಿಳಿದಿತ್ತು.

     ಲಾಕ್ ಡೌನ್ ಮಧ್ಯೆ ಅನಾವಶ್ಯಕವಾಗಿ ತಿರುಗುತಿದ್ದವರನ್ನು ಹಿಡಿಯಲು ಪ್ರೊಬೇಷನರಿ ಪೊಲೀಸ್ ಸಬ್ ಇನ್ಸಪೆಕ್ಟರ್ ವೊಬ್ಬರು ಬಿದ್ದರೂ ಮತ್ತೆ ಎದ್ದು ಹೋಗಿ ಹಿಡಿದ ಘಟನೆ ಇಲ್ಲಿನ ಭಗತ್ ಸಿಂಗ್ ನಗರದಲ್ಲಿ ನಡೆದಿದೆ.ನಿಷೇಧಾಜ್ಞೆ  ಜಾರಿಯಲ್ಲಿದ್ದರೂ ಅದ್ಯಾವುದರ ಪರಿವೆಯೂ ಇಲ್ಲದವರಂತೆ ಗುಂಪು ಕಟ್ಟಿಕೊಂಡು ಕುಳಿತಿದ್ದ ಯುವಕರನ್ನು ಹಿಡಿಯಲು ಹೋದ ಪ್ರೊಬೇಷನರಿ ಎಸ್‍ಐ ಹಾಗೂ ಪೊಲೀಸ್ ಸಿಬ್ಬಂದಿ ಧಾವಿಸಿದರು. ಆಗ ಯುವಕರು ಪೊಲೀಸರನ್ನು ಕಂಡ ತಕ್ಷಣ ಓಡಲಾರಂಭಿಸಿದರು. ಓಡಿ ಹೋಗುತ್ತಿದ್ದವರ ಬೆನ್ನು ಹತ್ತಿದ ಪ್ರೊಬೇಷನರಿ ಎಸ್‍ಐ ಹಾಗೂ ಸಿಬ್ಬಂದಿ ಕೊನೆಗೂ ಬಿಡದೇ ಹಿಡಿದರು

    ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿ ಇರುವಂತೆ ಸಾಕಷ್ಟು ಮನವಿ ಮಾಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ನೇತೃತ್ವದಲ್ಲಿ ನಗರದ ವಿವಿಧೆಡೆ ಸಂಚರಿಸಿ, ಸಾಕಷ್ಟು ಎಚ್ಚರಿಕೆ ಸಹ ನೀಡಲಾಯಿತು. ಆದರೆ, ಜನ ಸ್ಪಂದಿಸದ್ದರಿಂದ ಅನಿವಾರ್ಯವಾಗಿ ಪೊಲೀಸರು ಜನರನ್ನು ಬಂಧಿಸಿ, ಡಿಎಆರ್ ಮೈದಾನಕ್ಕೆ ಕರೆ ತಂದ ಜನರ ಕೈಗೆ `ಕ್ಷಮಿಸಿ ನಾನು ಲಾಕ್ ಡೌನ್ ಉಲ್ಲಂಘಿಸಿದ್ದೇನೆ…’ ಎಂಬ ಭಿತ್ತಿಪತ್ರ ಕೊಟ್ಟು, ಆ ಎಲ್ಲರ ಫೋಟೋ, ವೀಡಿಯೋ ಮಾಡಿಕೊಳ್ಳಲಾಯಿತು. ಮತ್ತೆ ಯಾವುದೇ ಕಾರಣಕ್ಕೂ ಲಾಕ್ ಡೌನ್ ಆದೇಶ ಉಲ್ಲಂಸುವುದಿಲ್ಲವೆಂಬುದಾಗಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಲಾಯಿತು.

    ಇಲ್ಲಿನ ರಿಂಗ್ ರಸ್ತೆಯ ಜಿಲ್ಲಾಧಿಕಾರಿ ನಿವಾಸದ ಬಳಿಯಿಂದ ಆರಂಭಗೊಂಡ ಡಿಸಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ನೇತೃತ್ವದ ಅಧಿಕಾರಿ, ಸಿಬ್ಬಂದಿಗಳ ನಗರ ಸಂಚಾರ ವಿನೋಬ ನಗರ 2ನೇ ಮುಖ್ಯರಸ್ತೆ, ಹಳೆ ಪಿ.ಬಿ.ರಸ್ತೆ, ವೀರ ಮದಕರಿ ನಾಯಕ ವೃತ್ತ, ಹಗೇದಿಬ್ಬ ವೃತ್ತ, ಆಜಾದ್ ನಗರ, ಬಾಷಾ ನಗರ, ಸೈಯದ್ ಮುಸ್ತಫಾ ನಗರ ಸೇರಿದಂತೆ ವಿವಿಧೆಡೆ ಸಾಗಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap