ಹೊನ್ನಾಳಿ:
ಹಸುಗಳ ಮೈತೊಳೆಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಮಕ್ಕಳು ಜಲಸಮಾಧಿಯಾಗಿರುವ ದುರ್ಘಟನೆ ತಾಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದ ದೊಡ್ಡಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ. ಎಚ್. ಗೋಪಗೊಂಡನಹಳ್ಳಿ ಗ್ರಾಮದ ಗಣೇಶಪ್ಪ ಎಂಬುವವರ ಪುತ್ರ ಮಹೇಶ್(14) ಮತ್ತು ಅದೇ ಗ್ರಾಮದ ಕೆ. ರವಿ ಎಂಬುವವರ ಪುತ್ರ ಮನೋಜ್ ಅಲಿಯಾಸ್ ಮನು(14) ಮೃತ ದುರ್ದೈವಿಗಳು.
ಶುಕ್ರವಾರ ಬೆಳಿಗ್ಗೆ ಉಪಾಹಾರ ಸೇವನೆ ಬಳಿಕ ಹಸುಗಳನ್ನು ಮೇಯಿಸಲು ದೊಡ್ಡಕೆರೆ ಸಮೀಪದ ಹೊಲಕ್ಕೆ ತೆರಳಿದ ಬಾಲಕರು ಮಧ್ಯಾಹ್ನದ ಸುಡು ಬಿಸಿಲಿನ ತಾಪ ತಾಳಲಾರದೇ ಹಸುಗಳ ಮೈತೊಳೆಯಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ಆಯ ತಪ್ಪಿ ಕಾಲು ಜಾರಿ ನೀರು ಆಳ ಇರುವ ಪ್ರದೇಶಕ್ಕೆ ಹೋಗಿದ್ದಾರೆ. ಈಜು ಬಾರದ ಕಾರಣ ನೀರಿನಿಂದ ಮೇಲೆ ಬರಲು ಆಗಿಲ್ಲ. ನೀರಿನಲ್ಲಿ ಮುಳುಗುವ ವೇಳೆ ಬಾಲಕರ ಆರ್ತನಾದ ಕೇಳಿ ಹಾಗೂ ಹಸುಗಳು ತಪ್ಪಿಸಿಕೊಂಡು ನೀರಿನಿಂದ ಹೊರಗೆ ಓಡಿ ಬಂದುದನ್ನು ಗಮನಿಸಿದ ಅಕ್ಕ-ಪಕ್ಕದ ಜಮೀನುಗಳ ರೈತರು ಕೆರೆಯತ್ತ ಧಾವಿಸಿದರಾದರೂ ಆ ವೇಳಗೆ ಬಾಲಕರು ಕೆರೆಯ ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹರಸಾಹಸ:
ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರ ಶವಗಳನ್ನು ಹುಡುಕಿ ಮೇಲೆತ್ತಲು ಹರಸಾಹಸಪಡಬೇಕಾಯಿತು. ಕೆರೆಯ ಮಣ್ಣನ್ನು ಜಮೀನುಗಳಿಗೆ ಸಾಗಿಸಿದ ಕಾರಣಕ್ಕೆ ಕೆರೆಯಲ್ಲಿ ದೊಡ್ಡ-ದೊಡ್ಡ ಕಂದಕಗಳು ನಿರ್ಮಾಣವಾಗಿದ್ದವು. ಹಾಗಾಗಿ, ಕೆರೆಯ ಜಿಗುಟು ಮಣ್ಣಿನಲ್ಲಿ ಶವಗಳು ಸಿಲುಕಿದ ಕಾರಣಕ್ಕೆ ಶವಗಳನ್ನು ಪತ್ತೆಹಚ್ಚುವುದು ಸುಲಭವಾಗಿರಲಿಲ್ಲ. ಮೊದಲಿಗೆ ಗ್ರಾಮದ ಜನರು ಪ್ರಯತ್ನಪಟ್ಟರು. ಶವಗಳನ್ನು ಹುಡುಕುವಲ್ಲಿ ಯಶ ಕಾಣಲಿಲ್ಲ.
ಬಳಿಕ ಹೊನ್ನಾಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದರೂ ಆಗಲಿಲ್ಲ. ಆ ನಂತರ, ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಮಾರ್ಗದರ್ಶನದಲ್ಲಿ ಪಿಎಸ್ಸೈ ಟಿ.ಎನ್. ತಿಪ್ಪೇಸ್ವಾಮಿ ಅವರು ತಾಲೂಕಿನ ಬೇಲಿಮಲ್ಲೂರು ಗ್ರಾಮದ ನುರಿತ ಈಜುಗಾರರಾದ ಮಂಜಪ್ಪ ಮತ್ತು ತಂಡದವರನ್ನು ಕರೆಸಿದರು. ಬೇಲಿಮಲ್ಲೂರಿನ ಮಂಜಪ್ಪ ಮತ್ತು ಇತರರು ಬಾಲಕರ ಶವಗಳನ್ನು ಹುಡುಕಿ, ಮೇಲೆ ತಂದರು.
ಶವಗಳನ್ನು ನೋಡುತ್ತಿದ್ದಂತೆ ಬಾಲಕರ ತಂದೆ-ತಾಯಿಯರು, ಪೋಷಕರು, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ತಹಸೀಲ್ದಾರ್ ತುಷಾರ್ ಬಿ.ಹೊಸೂರ್, ಪಿಎಸ್ಸೈ ಟಿ.ಎನ್. ತಿಪ್ಪೇಸ್ವಾಮಿ ಸೇರಿದಂತೆ ಇತರರು ಶವಗಳ ಶೋಧ ಕಾರ್ಯದಲ್ಲಿ ಸಾಥ್ ನೀಡಿದರು.
ಜನಸಾಗರ:
ಕೆರೆಯಲ್ಲಿ ಮುಳುಗಿ ಬಾಲಕರು ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಎಚ್. ಗೋಪಗೊಂಡನಹಳ್ಳಿ ಗ್ರಾಮದ ಸುತ್ತ-ಮುತ್ತಲ ಗ್ರಾಮಗಳಾದ ಬಲಮುರಿ, ಸೋಮನಮಲ್ಲಾಪುರ, ಎಚ್. ಕಡದಕಟ್ಟೆ, ಹೊನ್ನಾಳಿ, ಹನುಮಸಾಗರ, ರಟ್ಟೇಹಳ್ಳಿ ತಾಲೂಕಿನ ಗುಡ್ಡದ ಮಾದಾಪುರ, ಕಮಲಾಪುರ ಮತ್ತಿತರ ಗ್ರಾಮಗಳ ಜನರು ತಂಡೋಪತಂಡವಾಗಿ ಕೆರೆಯತ್ತ ಧಾವಿಸಲು ಪ್ರಾರಂಭಿಸಿದರು.
ಶವಪರೀಕ್ಷೆ:
ಕತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್. ಮಲ್ಲಿಕಾರ್ಜುನ್ ಮತ್ತು ಇತರ ವೈದ್ಯರ ತಂಡ ಕೆರೆಯ ತಟದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿತು. ಬಳಿಕ ವಾರಸುದಾರರಿಗೆ ಶವಗಳನ್ನು ಹಸ್ತಾಂತರಿಸಲಾಯಿತು. ಆ ನಂತರ, ಎಚ್. ಗೋಪಗೊಂಡನಹಳ್ಳಿ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನವಿ:
ಮೃತ ಬಾಲಕರ ಪೋಷಕರು ಬಡವರಾಗಿದ್ದು, ಇದೀಗ ಅವರ ಮಕ್ಕಳು ಮೃತರಾಗಿದ್ದಾರೆ. ತೀವ್ರ ನೊಂದಿರುವ ರೈತರ ಕುಟುಂಬಕ್ಕೆ ಸಮರ್ಪಕ ಪರಿಹಾರ ದೊರಕಿಸಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








