ಕೊರಟಗೆರೆ
ಅತಿವೇಗವಾಗಿ ಬಿಸಿದ ಬಿರುಗಾಳಿಗೆ ಚನ್ನರಾಯನದುರ್ಗ ಮತ್ತು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ 25 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಪರಿಣಾಮ, ಬೆಸ್ಕಾಂ ಇಲಾಖೆಗೆ 2 ಲಕ್ಷ ರೂ.ಗೂ ಅಧಿಕ ನಷ್ಟವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬಸವನಹಳ್ಳಿ, ಕ್ಯಾಶವಾರ, ಆರ್.ವೆಂಕಟಾಪುರ, ಅಕ್ಕಿರಾಂಪುರ, ತೊಗರಿಘಟ್ಟ, ರೆಡ್ಡಿಹಳ್ಳಿ ಮತ್ತು ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಬುಕ್ಕಾಪಟ್ಟಣ, ಜಂಪೇನಹಳ್ಳಿ, ಜೆಟ್ಟಿಅಗ್ರಹಾರ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಬಿರುಗಾಳಿಗೆ ನೆಲಕ್ಕುರುಳಿವೆ.
ರಭಸವಾದ ಬಿರುಗಾಳಿಯಿಂದಾಗಿ ಮಳೆಯು ಮಾಯವಾಯಿತು. ಆದರೆ ರೈತರ ಅಡಕೆ, ತೆಂಗು ಮತ್ತು ಬಾಳೆ ಮರಗಳು ನೆಲಕ್ಕೆ ಬಿದ್ದು ಸಾವಿರಾರು ರೂ. ನಷ್ಟವಾಗಿದೆ. ಗ್ರಾಮೀಣ ಪ್ರದೇಶದ ತೋಟದ ಮನೆಗಳ ಶೀಟ್ ಮತ್ತು ಹೆಂಚಿನ ಮನೆಗಳ ಛಾವಣಿ ಬಿರುಗಾಳಿಗೆ ಕಿಮೀ ದೂರಕ್ಕೆ ಹಾರಿ ಹೋಗಿವೆ. ಜಯಮಂಗಲಿ ನದಿ ಪಾತ್ರದ ರೈತರು ಬಿರುಗಾಳಿಗೆ ಭಯ ಭೀತರಾಗಿದ್ದಾರೆ.
ಕೊರಟಗೆರೆ ಬೆಸ್ಕಾಂ ಎಇಇ ವಿ.ಮಲ್ಲಣ್ಣ ಮಾತನಾಡಿ, ಅತಿ ವೇಗದ ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಮುರಿದು ಬಿದ್ದು, ಸೋಮವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಬೆಸ್ಕಾಂ ಇಲಾಖೆಯ ಪವರ್‍ಮನ್‍ಗಳ ಹಗಲು ರಾತ್ರಿ ಕೆಲಸದಿಂದ 24 ಗಂಟೆಯೊಳಗೆ 25 ವಿದ್ಯುತ್‍ಕಂಬಗಳನ್ನು ಪುನಃ ಮರು ಜೋಡಣೆ ಮಾಡಿ ವಿದ್ಯುತ್ ಪೂರೈಕೆ ಮಾಡಲಾಗಿದೆ. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
