ತುಮಕೂರು
ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ, ದಿನದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗುರುವಾರ ಜಿಲ್ಲೆಯ 81 ಜನರಲ್ಲಿ ಪಾಸಿಟೀವ್ ದೃಢಪಟ್ಟಿದೆ. ಇದರೊಂದಿಗೆ ಈವರೆಗೆ ಸೋಂಕಿತರ ಸಂಖ್ಯೆ 1617ಕ್ಕೆ ಏರಿದೆ. ಜೊತೆಗೆ, ಜಿಲ್ಲೆಯಲ್ಲಿ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ತುಮಕೂರು ನಗರದ ಕೆಹೆಚ್ಬಿ ಕಾಲೋನಿಯ 55 ವರ್ಷದ ಪುರುಷ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇವರ ಗಂಟಲು ದ್ರವ ಪರೀಕ್ಷಿಸಿದಾಗ ಪಾಸಿಟೀವ್ ವರದಿ ಬಂದಿತ್ತು. ಇವರು ಇದೇ 29ರಂದು ಮೃತರಾದರು.
ತುಮಕೂರು ತಾಲ್ಲೂಕು ಹೆಗ್ಗೆರೆಯ 63 ವರ್ಷದ ಗಂಡಸು ಕೋವಿಡ್ ಸೋಂಕಿನಿಂದ ಅಸುನೀಗಿದ್ದಾರೆ. ಇವರು ಜ್ವರ, ಕೆಮ್ಮಿನ ಸಮಸ್ಯೆಯಿಂದ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲು ದ್ರವ ಪರೀಕ್ಷಿಸಲಾಗಿದ್ದು, ಕೋವಿಡ್ ಖಚಿತವಾಗಿತ್ತು. ಬುಧವಾರ ಇವರು ಸಾವಿಗೀಡಾದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ 63 ವರ್ಷದ ಗಂಡಸಿಗೆ ಕೊರೊನಾ ಸೋಂಕು ಇರುವ ವರದಿ ಬಂದಿದ್ದು, ಇವರು ಚಿಕಿತ್ಸೆಗೆ ಸ್ಪಂದಿಸದೆ ಮೃತರಾದರು.ಗುಬ್ಬಿ ತಾಲ್ಲೂಕು ನಿಟ್ಟೂರಿನ 80 ವರ್ಷದ ಮಹಿಳೆ ಸೋಂಕಿಗೆ ಬಲಿಯಗಿದ್ದಾರೆ. ಇವರು ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಗಂಟಲು ದ್ರವದ ಪರೀಕ್ಷೆಯಲ್ಲಿ ಪಾಸಿಟೀವ್ ವರದಿ ಬಂದಿದ್ದು, ಇವರು ಅಸುನೀಗಿದರು. ಇದೂವರೆಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 52ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಗುರುವಾರ ವರದಿಯಾದ 81 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 38 ಜನರಲ್ಲಿ ಕೊರೊನ ಸೋಂಕು ಖಚಿತವಾಗಿದೆ. ಕುಣಿಗಲ್ ತಾಲ್ಲೂಕಿನಲ್ಲಿ 11, ತಿಪಟೂರು ತಾಲ್ಲೂಕಿನಲ್ಲಿ 10, ಮಧುಗಿರಿ ತಾಲ್ಲೂಕಿನಲ್ಲಿ 8, ಪಾವಗಡ ತಾಲ್ಲೂಕಿನಲ್ಲಿ 5, ಗುಬ್ಬಿ ತಾಲ್ಲೂಕಿನಲ್ಲಿ 4, ತುರುವೇಕೆರೆ ತಾಲ್ಲೂಕಿನಲ್ಲಿ 2, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಹಾಗೂ ಶಿರಾ ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿದೆ. ಇವರಲ್ಲಿ 52 ಪುರುಷರು, 29 ಮಹಿಳೆಯರು ಸೇರಿದ್ದಾರೆ. 60 ವರ್ಷ ವಯಸ್ಸಿನ ಮೇಲ್ಪಟ್ಟ 16 ಜನ ಇದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 1617 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 705, ಕುಣಿಗಲ್ ತಾ. 156, ಪಾವಗಡ ತಾ. 130, ಮಧುಗಿರಿ ತಾ. 127, ಶಿರಾ 99, ತಿಪಟೂರು ತಾ. 83, ಗುಬ್ಬಿ ತಾ. 83, ಚಿಕ್ಕನಾಯಕನಹಳ್ಳಿ ತಾ. 82, ಕೊರಟಗೆರೆ ತಾ. 76, ತುರುವೇಕೆರೆ ತಾ. 76, ಪ್ರಕರಣ ವರದಿಯಾಗಿವೆ.ಗುರುವಾರ ಗುಣಮುಖರಾಗಿ ಆಸ್ಪತ್ರೆಯಿಂದ 11 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 736 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 844 ಸಕ್ರಿಯ ಪ್ರಕರಣಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ