ಕುಣಿಗಲ್
ಶೋಷಿತರು, ದುರ್ಬಲರು, ಬಡವರ ಏಳಿಗೆಗೆ ಶ್ರಮಿಸಿದಂತಹ ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂರವರ ಕೊಡುಗೆ ದೇಶಕ್ಕೆ ಅಪಾರ ಎಂದು ತಾಲ್ಲೂಕು ದಂಡಾಧಿಕಾರಿ ತಹಸೀಲ್ದಾರ್ ವಿಶ್ವನಾಥ್ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸರಳವಾಗಿ ಭಾರತದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂರವರ 112ರ ಜನ್ಮಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಡಾ. ಬಾಬು ಜಗಜೀವನರಾಂರವರು ದೇಶದ ಶೋಷಿತ ಬಡವರ, ದೀನದಲಿತರ ಏಳಿಗೆಗೆ ಶ್ರಮಿಸಿದಂತಹ ಮಹಾನ್ ವ್ಯಕ್ತಿಯಾಗಿದ್ದು, ಇವರು ಕೇಂದ್ರ ಸರ್ಕಾರದಲ್ಲಿ ರಕ್ಷಣೆ, ಕಾರ್ಮಿಕ, ಕೃಷಿ ಸೇರಿದಂತೆ ಹಲವಾರು ಖಾತೆಗಳನ್ನ ನಿರ್ವಹಿಸಿ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದರು.
ದೇಶದಲ್ಲಿ ತೀವ್ರ ತರಹದ ಬರಗಾಲವಿದ್ದಾಗ ಹಸಿರು ಕ್ರಾಂತಿಯನ್ನ ದೇಶಾದ್ಯಂತ ಜಾರಿಗೆ ತಂದು ಆಹಾರದ ಸಮಸ್ಯೆಗಳನ್ನ ನೀಗಿಸಿದಂತಹ ನಾಯಕರಾಗಿದ್ದು, ಕೇಂದ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿ ಅಪಾರ ಜ್ಞಾನ, ಅನುಭವವನ್ನ ದೇಶಕ್ಕೆ ಧಾರೆ ಎರೆದಂತಹ ಮಹಾನ್ ವ್ಯಕ್ತಿಯಾಗಿರುವ ಇವರ ಜನ್ಮ ಜಯಂತಿಯನ್ನ ನಾವುಗಳು ಚುನಾವಣೆಯ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಅವರ ಆದರ್ಶ ಗುಣಗಳನ್ನ ಸಮಾಜದ ಅಭಿವೃದ್ಧಿ ಮತ್ತು ಏಳಿಗೆಗೆ ಅನುಕರಿಸುವಂತಾಗಲಿ ಎಂದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಯಾದ ಜಯಸ್ವಾಮಿಯವರು ಮಾತನಾಡಿ, ಬಾಬುಜೀಯವರು ಈ ದೇಶದ ಅಭಿವೃದ್ಧಿಗೆ ತನ್ನದೇ ಆದಂತಹ ಕೊಡುಗೆ ನೀಡಿದಂತಹ ಮಹಾತ್ಮರಾಗಿದ್ದು, ಇವರ ತತ್ವ ಸಿದ್ಧಾಂತಗಳನ್ನ ಅಳವಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಯಣ್ಣ, ದಲಿತ ಮುಖಂಡರಾದ ವರದರಾಜು, ರಾಮಚಂದ್ರಯ್ಯ, ದಲಿತ್ ನಾರಾಯಣ್, ಎನ್.ರಾಜೇಶ್, ಜಿಲ್ಲಾ ಲಂಚಮುಕ್ತ ವೇದಿಕೆಯ ಅಧ್ಯಕ್ಷ ಹೆಚ್.ಜಿ.ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ