ಹೆಣದ ಮೇಲೆ ಹಣ ಮಾಡಲು ಮುಂದಾದ ಬಿಜೆಪಿ : ಡಿಕೆಶಿ

ಬೆಂಗಳೂರು

    ಕೊರೋನಾ ಸೋಂಕು ಜೊತೆಗೆ ಭ್ರಷ್ಟಾಚಾರದ ಸೋಂಕು ಸಹ ವ್ಯಾಪಕವಾಗಿ ಹರಡಿದ್ದು, ಹೆಣದ ಮೇಲೆ ಹಣ ಮಾಡಲು ರಾಜ್ಯ ಬಿಪೆಪಿ ಸರ್ಕಾರ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನಮ್ಮ ಬಳಿ ಸಹಕಾರ ಕೇಳಿತ್ತು. ನಾವು ಎಲ್ಲ ರೀತಿಯ ಬೆಂಬಲ ಕೊಟ್ಟಿದ್ದೇವೆ. ಸರ್ಕಾರದ ಆಟಗಳನ್ನೆಲ್ಲ 120 ದಿನ ಸಹಿಸಿಕೊಂಡಿದ್ದೇವೆ. ಆದರೆ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಬೆಂಗಳೂರು ಉಸ್ತುವಾರಿಗೆ ನಿಯೋಜನೆಗೊಂಡಿರುವ 9 ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಒಬ್ಬ ಮಂತ್ರಿಯೂ ಆಸ್ಪತ್ರೆಗೆ ಹೋಗಿ ಸೋಂಕಿತರನ್ನು ವಿಚಾರಿಸಲಿಲ್ಲ. ಸೋಂಕಿಗೆ ತುತ್ತಾದವರಿಗೆ ಧೈರ್ಯ ತುಂಬಲಿಲ್ಲ. ಸತ್ತವರನ್ನು ಕೀಳಾಗಿ ನೋಡಿಕೊಳ್ಳಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ಸರ್ಕಾರಕ್ಕೆ ಯಾವುದೇ ಸ್ಪಷ್ಡ ಗುರಿ ಇಲ್ಲ. ಇದು ಕೇವಲ ಭ್ರಷ್ಟಚಾರದ ಸರ್ಕಾರ. ನಾವು ಸರ್ವ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಿದ ಮೇಲೆ ನೆಪಮಾತ್ರಕ್ಕೆ ಸಭೆ ಕರೆದರು. ಸರ್ಕಾರದ ಆಹಾರದ ಕಿಟ್‍ಗಳ ಮೇಲೆ ಬಿಜೆಪಿ ನಾಯಕರು ತಮ್ಮ ಹೆಸರು ನಮೂದಿಸಿ ಕಿಟ್ ಹಂಚಿದ್ದಾರೆ. ಕಾರ್ಮಿಕರಿಗೆ ಊಟವೊಂದಕ್ಕೆ 1200 ರೂ. ಕೊಟ್ಟು ಊಟ ಒದಗಿಸಿರುವುದಾಗಿ ಲೆಕ್ಕ ನೀಡಿದ್ದಾರೆ. ಯಾವ ಫೈವ್ ಸ್ಟಾರ್ ಹೋಟೆಲ್‍ನಿಂದ ಊಟ ಕಳಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಶಿವಕುಮಾರ್ ಕುಟುಕಿದರು.

    ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. 110 ದಿನ ಆದ ಮೇಲೆ ಖಾಸಗಿ ಆಸ್ಪತ್ರೆಯವರನ್ನು ಕರೆದು ಮಾತನಾಡುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವೃತ್ತಿ ಪರರಿಗೆ 5000 ರೂ. ಕೊಡುವುದಾಗಿ ಹೇಳಿದ್ದರು. ಆದರೆ ಪರಿಹಾರ ಶೇ. 10 ರಷ್ಟು ಜನರಿಗೆ ತಲುಪಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಅಲ್ಲದೆ ಪ್ರತಿಭಟನಾನಿರತರನ್ನು ಕರೆದು ಮಾತನಾಡುವ ಸೌಜನ್ಯವೂ ಈ ಸರ್ಕಾರಕ್ಕೆ ಇಲ್ಲ. ಪೌರ ಕಾರ್ಮಿಕರಿಗೆ ಜೀವನದ ರಕ್ಷಣೆಯಿಲ್ಲ. ಅಧಿಕಾರಿಗಳ ಕಡೆಯಿಂದ ಮಾಹಿತಿ ಕೊಡುವುದಾದರೆ ಇವರುಗಳೆಲ್ಲ ಏಕೆ ಮಂತ್ರಿ ಆಗಬೇಕಿತ್ತು ಎಂದು ಪ್ರಶ್ನಿಸಿದರು.

    ಕೋವಿಡ್ ಸಂಕಷ್ಟದಿಂದಾಗಿ ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಒಂದು ವರ್ಷ ಮನ್ನಾ ಮಾಡಬೇಕು. ಸರ್ಕಾರ ಯಾವುದೇ ಅವ್ಯಹಾರ ಮಾಡಿಲ್ಲ ಎಂದ ಮೇಲೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ಮಾಡಲು, ತಪಾಸಣೆ ಮಾಡಲು ಅವಕಾಶ ಕೊಡಬೇಕು. ಅದಕ್ಕೂ ಅನುಮತಿ ನೀಡಲು ಏನು ಸಮಸ್ಯೆ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

   21 ದಿನದಲ್ಲಿ ಕೊರೊನಾ ಯುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇದೀಗ 121 ದಿನಗಳು ಮುಗಿದು ಹೋಗಿವೆ. ಈಗ ಏನು ಪ್ರಗತಿಯಾಗಿದೆ ಎಂಬುದನ್ನು ಸರ್ಕಾರ ಹೇಳಬೇಕು. ಇಡೀ ದೇಶದಲ್ಲಿ ಕರ್ನಾಟಕಕ್ಕೆ ಕಪ್ಪು ಚುಕ್ಕೆಯಾಗಿದೆ. ಇವರನ್ನು ಆಧುನಿಕ ಭಾರತದ ಕೌರವರ ಲೂಟಿ ಅಂತ ಕರೆಯಬೇಕೆ ಎಂದು ವ್ಯಂಗ್ಯವಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link