ಚಳ್ಳಕೆರೆ
ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ನಡೆವೆಯೂ ಸಹ ಕೊರೋನಾ ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಪ್ರಯಾಸ ಪಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಿಂದ ಇಲ್ಲಿನ ಜನರು ಚಿಂತಾಕ್ರಾಂತರಾಗಿದ್ದು, ನಗರ ಪ್ರದೇಶದಲ್ಲಿ ಇದುವರೆಗೂ ಕೇವಲ ಮನೆಗಳು ಮತ್ತು ರಸ್ತೆಗಳನ್ನು ಸೀಲ್‍ಡೌನ್ ಮಾಡುತ್ತಿದ್ದ ನಗರಸಭೆ ಈಗ ತನ್ನ ಕಚೇರಿಯನ್ನೇ ಸೀಲ್‍ಡೌನ್ ಮಾಡುವ ಮೂಲಕ ಜನರ ಭಯಕ್ಕೆ ಅಭಯ ನೀಡಿದೆ.
ಇಲ್ಲಿನ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 45 ವರ್ಷದ ಡಿ.ಗ್ರೂಪ್ ನೌಕರರ ಇತ್ತೀಚೆಗೆ ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದು, ಗುರುವಾರ ಈತನ ಪರೀಕ್ಷೆ ನಡೆಸಿದ ಇಲ್ಲಿನ ಆರೋಗ್ಯ ಇಲಾಖೆ ಅಂದು ಸಂಜೆ ಈತನಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಡಿಸಿದ ಹಿನ್ನೆಲೆಯಲ್ಲಿ ನಗರಸಭೆ ಕಾರ್ಯಾಲಯವನ್ನು ತಹಶೀಲ್ದಾರ್ ಸೂಚನೆಯಂತೆ ಸೀಲ್‍ಡೌನ್ ಮಾಡಲಾಗಿದೆ.
ಈಗಾಗಲೇ ಚಳ್ಳಕೆರೆ ನಗರದ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸೀಲ್‍ಡೌನ್ ಮಾಡಲಾಗಿದ್ದು, ಬಹುತೇಕ ಕಡೆ ಇನ್ನೂ ಸೀಲ್‍ಡೌನ್ ತೆರವುಗೊಳಿಸಿಲ್ಲ. ನಗರದ ತ್ಯಾಗರಾಜನಗರ, ಹೌಸಿಂಗ್ ಬೋಡ್ ಕಾಲೋನಿ, ಹಳೇಟೌನ್, ಗಾಂಧಿನಗರ, ಅಜ್ಜಯ್ಯನಗುಡಿ ರಸ್ತೆ, ಉಡಲಸಮ್ಮ ದೇವಸ್ಥಾನ, ಪಾವಗಡ ರಸ್ತೆ ಮುಂತಾದ ಕಡೆಗಳಲ್ಲಿ ಸೀಲ್‍ಡೌನ್ ಮುಂದುವರೆದಿದೆ. ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಇದುವರೆಗೂ ಯಾವುದೇ ಸರ್ಕಾರದ ಕಚೇರಿಗಳು ಸೀಲ್‍ಡೌನ್ ಆಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಚಳ್ಳಕೆರೆ ನಗರದಲ್ಲಿ ನಗರಸಭೆಯ ಕಾರ್ಯಾಲಯ ಸೀಲ್‍ಡೌನ್ ಆಗುವ ಮೂಲಕ ಕೊರೋನಾ ವೈರಾಣುವಿನ ಅಪಾಯವನ್ನು ಜಾಗೃತಿಗೊಳಿಸಿದೆ ಎನ್ನಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ