ಬೆಂಗಳೂರು:
ಕರ್ನಾಟಕದಲ್ಲಿ ಕೇಬಲ್ ಹಾವಳಿಗೂ ಮೊದಲಿನಿಂದಲೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ದೂರದರ್ಶನದ ಒಂದು ಭಾಗವಾದ ಡಿಡಿ ಚಂದನ ವಾಹಿನಿಯ ಉದ್ಯೋಗಿಯೊಬ್ಬರಿಗೆ ಕೋವಿಡ್ -19 ಸೋಂಕು ಹರಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಸಂದೇಶ ವಿಡಿಯೋ ಹರಿದಾಡುತ್ತಿದೆ. ಈ ಬಗ್ಗೆ ಉದ್ಯೋಗಿಗಳು ಹಾಗೂ ಡಿಡಿ ಚಂದನವಾಹಿನಿಯ ಬಳಗ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಕೋವಿಡ್ -19 ಸೋಂಕು ದೃಢಪಟ್ಟಿರುವ ನಮ್ಮ ಕ್ಯಾಮರಾ ಮ್ಯಾನ್ ಒಬ್ಬರು ತಮಿಳುನಾಡಿನಿಂದ ವಾಪಸ್ ಆಗಿ ಮೇ 10ರಿಂದ 25ರ ವರೆಗೆ ನಿರಂತರವಾಗಿ ಚಂದನ ವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸಿರುವುದಾಗಿ ತಪ್ಪು ಮಾಹಿತಿ ಬಿತ್ತರಿಸಲಾಗಿದೆ. ಆದರೆ ಇದು ಸುಳ್ಳುಸುದ್ದಿ ಎಂದು ಟ್ವೀಟ್ ಮೂಲಕ ವಾಹಿನಿ ಸ್ಪಷ್ಟೀಕರಣ ನೀಡಿದೆ.
ದೇಶದ ಅಧಿಕೃತ ವಾಹಿನಿಯಾಗಿ ಗುರುತಿಸಿಕೊಂಡಿರುವ ದೂರದರ್ಶನದ ನಮ್ಮ ಸಿಬ್ಬಂದಿ ಸಂಕಷ್ಟ ಹಾಗೂ ಸವಾಲಿನ ಪರಿಸ್ಥಿತಿಯಲ್ಲೂ ವೈಯಕ್ತಿಕ ಅಪಾಯಗಳನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದೆ. ನಮ್ಮ ದೂರದರ್ಶನದ ಕ್ಯಾಮರಾಮನ್ ಅವರು ಚಂಡೀಗಢದಲ್ಲಿ ಕೆಲಸ ಮಾಡುತ್ತಿದರು. ಅವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಂದನ ವಾಹಿನಿಯಲ್ಲಿ ಕರ್ತವ್ಯ ನಿರತರಾಗಿದ್ದರು.
ಮೊನ್ನೆ 27ರಂದು ಅವರಿಗೆ ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ದೂರದರ್ಶನದ ಸಂಪೂರ್ಣ ಕುಟುಂಬ ಅವರು ತ್ವರಿತವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತಿದೆ.ಈ ಕ್ಯಾಮರಾಮನ್ ಕಳೆದ ಮೇ 23ರಂದು ರಾತ್ರಿ 8 ಗಂಟೆಯಿಂದ 9.30 ಗಂಟೆವರೆಗೆ ಮಾತ್ರ ಕರ್ತವ್ಯ ನಿರ್ವಹಿಸಿದ್ದರು.