ದೇಶದಲ್ಲಿ ಎಲ್ಲರಿಗೂ ಬೆಳೆ ಬೆಳೆಯುವ ಹಕ್ಕಿದೆ : ಬಿ ಸಿ ಪಾಟೀಲ್

ಬೆಂಗಳೂರು

       ಈ ದೇಶದಲ್ಲಿ ಎಲ್ಲರಿಗೂ ಫಸಲು ಬೆಳೆಯುವ ಹಕ್ಕಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

      ಯುವಕರು, ಪದವೀಧರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಬಹುತೇಕ ಮಂದಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಆಶಯವಿದ್ದು, ಇದು ಇವರೆಲ್ಲರಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

     ವಿಕಾಸಸೌಧದಲ್ಲಿ ನಡೆದ 2020-21ನೇ ಸಾಲಿನ ಮುಂಗಾರು-ಹಿಂಗಾರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಾತ್ರ ಕೃಷಿ ಭೂಮಿ ಮಾರಾಟಕ್ಕೆ ನಿರ್ಬಂಧವಿತ್ತು. ಈಗ ಭೂಮಿ ಮಾರಾಟಕ್ಕೆ ಸಚಿವ ಸಂಪುಟ ಅನುಮತಿ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೃಷಿ ಭೂಮಿ ಮಾರಾಟದ ಬಗ್ಗೆ ಕಂದಾಯ ಇಲಾಖೆ ಮಾರ್ಗಸೂಚಿ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಲಿದೆ. ನಂತರ ಕೃಷಿ ಕ್ಷೇತ್ರಕ್ಕೆ ಶುಕ್ರದೆಸೆ ಬರಲಿದೆ ಎಂದು ಹೇಳಿದ್ದಾರೆ.

     ಕೋವಿಡ್‍ನಿಂದ ಪರಿಸ್ಥಿತಿಯೇ ಬದಲಾಗಿದೆ. ಪ್ರತಿ ವರ್ಷ ಕೃಷಿ ವಿಶ್ವವಿದ್ಯಾಲಯದಿಂದ ಸಹಸ್ರಾರು ಪದವೀಧರರು ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ದೊರೆಯುವುದು ಕಷ್ಟ. ಇಂತಹ ಪದವೀಧರರು ಕೃಷಿ ಭೂಮಿ ಖರೀದಿಸಿ ಕೃಷಿಯತ್ತ ಆಕರ್ಷಕವಾಗಬೇಕು. ಆಗ್ರೋ ಇಂಡಸ್ಟ್ರೀಸ್, ಸಂಸ್ಕರಣಾ ಘಟಕ, ಶೀಥಲೀಕರಣ ಆಹಾರ ಉತ್ಪಾದನಾ ಘಟಕಗಳ ಸ್ಥಾಪನೆಗೆ ಈ ತಿದ್ದುಪಡಿ ಸಹಕಾರಿಯಾಗಲಿದೆ ಎಂದಿದ್ದಾರೆ.

    ಕೋವಿಡ್ 19 ಸಂಕಷ್ಟ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ರೈತರನ್ನು ಪ್ರೇರೇಪಿಸಿದ ಕೃಷಿ ಅಧಿಕಾರಿಗಳು ಸಹ ಕೊರೋನಾ ವಾರಿಯರ್ಸ್‍ಗಳು ಎಂದು ಬಿ.ಸಿ.ಪಾಟೀಲ್ ಬಣ್ಣಿಸಿದರು.ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಬಹಳಷ್ಟು ಸವಾಲುಗಳು ಈ ಇಲಾಖೆಯಲ್ಲಿವೆ. ಕೃಷಿ ಮತ್ತು ರೈತರಿಗಾಗಿ ದುಡಿಯುವ ಅವಕಾಶ ತಮಗೆ ಲಭಿಸಿದೆ. ಕೃಷಿ ಇಲಾಖೆಯಲ್ಲಿ ಅಭಿವೃದ್ಧಿ ಆದರೆ ಸರ್ಕಾರಕ್ಕೂ ಹೆಸರು ಬರುತ್ತದೆ. ದೇಶದ ಜನರಿಗೆ ಅನ್ನವೂ ಸಿಗುತ್ತದೆ. ಕೋವಿಡ್ ಸಂದಿಗ್ಧತೆ ಎನ್ನುವುದು ಯುದ್ಧದಂತೆ ಎಂದರು.

    ಕೊರೋನಾ ಸಂದರ್ಭದಲ್ಲಿಯೂ ತಾವು ಸುಮ್ಮನೆ ಕೂರದೇ ಮೂವತ್ತು ದಿನಗಳಲ್ಲಿ ಮೂವತ್ತು ಜಿಲ್ಲೆಗಳ ಪ್ರವಾಸ ಮಾಡಿ ರೈತರ, ಕೃಷಿ ಚಟುವಟಿಕೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದೆ. ಲಾಕ್ ಡೌನ್ ಕಾಲದಲ್ಲಿ ಗ್ರೀನ್ ಪಾಸ್ ನೀಡಿದ್ದು, ಅಗ್ರಿವಾರ್ ರೂಮ್ ಸ್ಥಾಪನೆ ಮಾಡಿದ್ದು ರೈತರಿಗೆ ಬಹಳಷ್ಟು ಉಪಯುಕ್ತವಾಯಿತು ಎಂದು ಹೇಳಿದರು.

     ಸೋಯಾಬಿನ್ ಬಿತ್ತನೆ ಬೀಜ ಮಧ್ಯಪ್ರದೇಶ, ಆಂದ್ರಪ್ರದೇಶದಿಂದ ಪೂರೈಕೆಯಾಗುತ್ತಿತ್ತು. ಸುಗ್ಗಿ ಸಂದರ್ಭದಲ್ಲಿ ಪ್ರವಾಹ ಬಂದಿರುವುದರಿಂದ ಬಹಳ ಕಡೆ ಸೋಯಾಬೀನ್ ಬೆಳೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಬಾರಿ ರೈತರು ಸೋಯಾ ಬೆಳೆಯುವುದಕ್ಕೂ ಮೊದಲೇ ಭೂಮಿ ಮತ್ತು ವಾತಾವರಣವನ್ನು ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು. ರೈತರಿಂದ ಒಟ್ಟು 1.5 ಲಕ್ಷ ಕ್ವಿಂಟಾಲ್ ಸೋಯಾಬೀನ್ ಬೀಜಕ್ಕೆ ಬೇಡಿಕೆ ಇತ್ತು. ಈಗಾಗಲೇ
1.04 ಲಕ್ಷ ಕ್ವಿಂಟಾಲ್ ಪೂರೈಸಿದ್ದೇವೆ ಎಂದರು.

     ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಕೃಷಿ ಆಯುಕ್ತ ಬ್ರಿಜೆಶ್ ಕುಮಾರ್ ದೀಕ್ಷಿತ್ ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap