ಕೊರಟಗೆರೆ
ಶಿಕ್ಷಣವು ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಶಿಕ್ಷಣವೇ ಮೊದಲ ಪ್ರಾಮುಖ್ಯತೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ. ಜಿ. ಪರಮೇಶ್ವರ್ ತಿಳಿಸಿದರು.ಅವರು ಪಟ್ಟಣದ ಸುವರ್ಣಮುಖಿ ನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೊರಟಗೆರೆ ತಾಲ್ಲೂಕು ತಿಗಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಿದ್ದ ಸಮುದಾಯದ 2019-20 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯೂಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಮಾತನಾಡಿದರು.
ತಿಗಳ ಸಮುದಾಯ ವ್ಯವಸಾಯದಲ್ಲಿ ಅತ್ಯಂತ ಶ್ರಮಜೀವಿಗಳ ಜನಾಂಗ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸಹ ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಗುರಿಯನ್ನು ಹೊಂದಲೇಬೇಕು. ಸಮಾಜ ಬದಲಾದಂತೆ ಶಿಕ್ಷಣ ನೀತಿಯು ಬದಲಾಗುತ್ತಿದ್ದು, ಹಿಂದುಳಿದ ಸಮಾಜಗಳು ಶಿಕ್ಷಣದಿಂದಲೇ ಸಾಮಾಜಿಕ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.
ಕೊರಟಗೆರೆ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ, ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ, ಸಮುದಾಯದ ಮಾಜಿ ಶಾಸಕರಾಗಿದ್ದ ಮುದ್ದರಾಮಯ್ಯನವರು ರಾಜಕೀಯ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳ ಮಧ್ಯೆ ಮುದ್ದರಾಮಯ್ಯನವರ ಗಾಂಧಿ ತತ್ವ ಹಾಗೂ ಸಂಪೂರ್ಣ ಸ್ವಚ್ಛ, ಪಾರದರ್ಶಕತೆ ಆದರ್ಶವಾಗಿ ಉಳಿದಿದೆ.
ಲಂಚವಿಲ್ಲದ ಗಾಂಧಿ ತತ್ವದ ರಾಜಕೀಯ ಜೀವನದ ವ್ಯಕ್ತಿಗಳು ದೇಶದಲ್ಲೇ ಅತಿ ವಿರಳ. ಆದ್ದರಿಂದ ಈ ಕಾರ್ಯಕ್ರಮವು ಅವರ ವೇದಿಕೆಯಲ್ಲಿ ನಡೆಯುತ್ತಿರುವುದು ಅರ್ಥಪೂರ್ಣವಾಗಿದ್ದು, ಯುವಕರು ಅವರ ಮಾರ್ಗದರ್ಶನ ಪಡೆಯಬೇಕು. ತಿಗಳ ಸಮುದಾಯಕ್ಕೆ ಶಿಕ್ಷಣ ಸೇರಿದಂತೆ ಎಲ್ಲಾ ರೀತಿಯ ಸಹಕಾರ ಮತ್ತು ಉನ್ನತಿಗೆ ಸದಾ ಜೊತೆಯಲ್ಲಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಟಿ.ಮಂಜುನಾಥ್, ರಾಜ್ಯ ಯುವ ಅಧ್ಯಕ್ಷ ಅಕ್ಷಯ್ ಕುಮಾರ್, ಟಿ. ಬೇಗೂರು ಕ್ಷೇತ್ರದ ಮುಖಂಡರಾದ ಅರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮುಖಂಡರುಗಳಾದ ಎಲ್.ರಾಜಣ್ಣ, ಚಿಕ್ಕರಂಗಯ್ಯ, ಶ್ರೀರಂಗಯ್ಯ, ಗೋವಿಂದಯ್ಯ, ತಾಲ್ಲೂಕು ತಿಗಳ ಕ್ಷೇಮಾಭಿವೃದ್ದಿ ಅಧ್ಯಕ್ಷ ಸರ್ವೇಶ್, ಯುವ ಸಮುದಾಯದ ಮೋಹನ್ ಕುಮಾರ್, ಪ್ರಕಾಶ್, ರಾಮಕೃಷ್ಣಯ್ಯ, ಲಕ್ಷ್ಮೀಕಾಂತಯ್ಯ, ಯೋಗೇಶ್ ಬಾಬು ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ