ಬೆಂಗಳೂರು
ಸಿದ್ದರಾಮಯ್ಯನವರು ನಾನು ಅಧಿಕಾರದ ಅಹಂನಿಂದ ಮಾತನಾಡಿದ್ದೇನೆ ಮತ್ತು ನನಗೆ ಉಪಕಾರ ಸ್ಮರಣೆ ಇರಬೇಕು ಎಂದಿದ್ದಾರೆ. ಅವರು ಹಿಂದೆ ನೀಡಿರುವ ಸಹಕಾರ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ ಮತ್ತು ನನ್ನ ಅಳಿಲು ಸೇವೆಯನ್ನು ಅವರೂ ಸಹ ಮರೆತಿಲ್ಲ ಎಂದು ಭಾವಿಸಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚ್ಯವಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ 5 ತಿಂಗಳಿನಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತು ಕಾರ್ಯ ಕ್ಷಮತೆಯಿಂದ ಅವಿರತವಾಗಿ ಶ್ರಮಿಸುತ್ತಿರುವ ಸನ್ನಿವೇಶದಲ್ಲಿ ನನ್ನ ಇಲಾಖೆಯ ವಿರುದ್ಧ ಸತ್ಯಕ್ಕೆ ದೂರವಾದ ಅರೋಪಗಳು ಬಂದಾಗ ಜವಾಬ್ದಾರಿಯುತವಾಗಿ ವಾಸ್ತವಾಂಶವನ್ನು ಜನರ ಮುಂದಿಟ್ಟದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ನಿಂದನೆ ಅಥವಾ ಅಪಹಾಸ್ಯದ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆರೋಪ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ನಿನ್ನೆ ಸರ್ಕಾರದ ಐವರು ಸಚಿವರು ತಿರುಗೇಟು ನೀಡಿದ್ದರು. ಈ ವೇಳೆ ಸುಧಾಕರ್ ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಆರೋಪಗಳಿಗೆ ಇಂದು ಬೆಳಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸುಧಾಕರ್ ಅವರು ಮಂತ್ರಿಯಾಗಿ ಎಷ್ಟು ವರ್ಷ ಆಯಿತು. ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದು ಯಾವಾಗ, ಅವರಿಗೆ ಸ್ವಲ್ಪ ಉಪಕಾರ ಸ್ಮರಣೆ ಇರಬೇಕು. ನಾನು ರಾಜ್ಯ ಮಂತ್ರಿ, ಸಂಪುಟ ದರ್ಜೆ ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಹೀಗಿರುವಾಗ ಸುಧಾಕರ್ ಅವರೇ ನನಗೇ ಪಾಠ ಹೇಳಿಕೊಟ್ಟರೆ ಹೇಗೆ? ಅಧಿಕಾರದ ಅಹಂನಿಂದ ಅವರು ಈ ರೀತಿ ಮಾತನಾಡುತ್ತಾರೆ. ಉಪಕಾರ ಸ್ಮರಣೆ ಮರೆತು ಬಾಯಿಗೆ ಬಂದಂತೆ ಮಾತನಾಡಬಾರದು. ಅಧಿಕಾರ ಬಂದ ಬಳಿಕ ಎಲ್ಲವನ್ನೂ ಮರೆಯಬಾರದು ಎಂದು ಹೇಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








