ಬೆಂಗಳೂರು
ರಾಜ್ಯಾದ್ಯಂತ ಜನರಿಗೆ ತಲೆನೋವಾಗಿ ಪರಿಣಮಿಸಿರುವ ಭೂ ಸರ್ವೇ ಕಾರ್ಯವನ್ನು ತ್ವರಿತಗತಿಯಿಂದ ಪೂರ್ಣಗೊಳಿ ಸಲು ಇನ್ನು ಮುಂದೆ ಪ್ರತಿವಾರ ಡಿಸಿ ಹಾಗೂ ಎಸಿಗಳು ಹಳ್ಳಿಗಳಿಗೆ ಹೋಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಹೆಚ್.ಕೆ.ಪಾಟೀಲ್,ಶಿವಲಿಂಗೇಗೌಡ,ಭರತ್ ರೆಡ್ಡಿ ಸೇರಿದಂತೆ ಹಲವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದರು.
ಈ ಹಿಂದೆ 2015 ರಲ್ಲಿ ಸರ್ಕಾರ ಪೋಡಿ ಅದಾಲತ್ ಕಾರ್ಯವನ್ನು ಆರಂಭಿಸಿತ್ತು.ಇಷ್ಟಾದರೂ ಭೂ ಸರ್ವೇ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.ಹೀಗಾಗಿ ಇನ್ನು ಮುಂದೆ ಪ್ರತಿ ವಾರ ಡಿಸಿ,ಎಸಿಗಳು ಹಳ್ಳಿಗಳಿಗೆ ಹೋಗಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಬೇಕು ಎಂದರು.
ರಾಜ್ಯವನ್ನು ಪೋಡಿ ಮುಕ್ತಗೊಳಿಸಲು ನಾವು ಎಷ್ಟೇ ಕ್ರಮ ಕೈಗೊಂಡರೂ ದೂರುಗಳು ಬರುತ್ತಲೇ ಇವೆ.ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿರುವುದರಿಂದ ಸಮಸ್ಯೆ ನಾವು ನಿರೀಕ್ಷಿಸಿದ ವೇಗದಲ್ಲಿ ಬಗೆಹರಿಯುತ್ತಿಲ್ಲ ಎಂದು ವಿವರಿಸಿದರು.ಇದಕ್ಕೂ ಮುನ್ನ ಮಾತನಾಡಿದ ಸದಸ್ಯರು,ಪೋಡಿ ಅದಾಲತ್ ಕಾರ್ಯವನ್ನು ಸರ್ಕಾರ ಹಮ್ಮಿಕೊಂಡು ಐದು ವರ್ಷಗಳೇ ಆಗುತ್ತಾ ಬಂದಿವೆ.ಆದರೆ ಭೂ ಸರ್ವೇ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು.
ಸರ್ಕಾರ ನೇಮಕ ಮಾಡಿದ ಸರ್ವೇಯರ್‍ಗಳಿಂದ ಈ ಕಾರ್ಯ ಸಾಧ್ಯವಾಗುತ್ತಿಲ್ಲ.ಇದರ ಬದಲು ಹಳ್ಳಿಗಳಲ್ಲಿ ಅಧಿಕಾರಿಗಳು ಹಾಗೂ ಜನರನ್ನು ಒಗ್ಗೂಡಿಸಿ ಸ್ಥಳದಲ್ಲೇ ಸಾಕ್ಷ್ಯ ಪಡೆದು ಇಂತವರು ಈ ಭೂಮಿಯನ್ನು ಹಿಂದಿನಿಂದ ಉಳುತ್ತಿದ್ದಾರೆ ಎಂಬ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಬೇಕು.
ಹಾಗೆ ಮಾಡದಿದ್ದರೆ ರಾಜ್ಯವನ್ನು ಪೋಡಿ ಮುಕ್ತವನ್ನಾಗಿ ಮಾಡಲು ಸಾಧ್ಯವಿಲ್ಲ.ದಿನ ಬೆಳಗಾದರೆ ಶಾಸಕರಾದ ನಮಗೆ ಶೇಕಡಾ ಐವತ್ತರಷ್ಟು ದೂರುಗಳು ಭೂ ಸರ್ವೇ ಕಾರ್ಯದ ಬಗ್ಗೆಯೇ ಬರುತ್ತವೆ.ಎಷ್ಟೋ ಪ್ರಕರಣಗಳು ಬಗೆಹರಿಯದೆ ರೈತರು ಸಂಕಟ ಅನುಭವಿಸುತ್ತಿದ್ದಾರೆ.ಹಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.ಹೀಗಾಗಿ ಸರ್ಕಾರ ಭೂ ಸರ್ವೇ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.
ಒಂದು ಹಂತದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್,ಒಂದು ಗ್ರಾಮದಲ್ಲಿ ನೂರು ಎಕರೆ ಭೂಮಿ ಇದ್ದರೆ ನೂರೈವತ್ತು ಎಕರೆ ಭೂಮಿಯನ್ನು ಮಂಜೂರು ಮಾಡುವ ಕೆಲಸವಾಗಿದೆ.ಇದರ ಪರಿಣಾಮವಾಗಿ ರೈತರ ನಡುವೆ ಕಲಹಗಳು ಹೆಚ್ಚಾಗುತ್ತಿವೆ. ತಹಸೀಲ್ದಾರ್‍ಗಳೂ ನಿವೃತ್ತರಾದ ಮೇಲೆ ಇಂತವರಿಗೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಸಹಿ ಹಾಕಿಕೊಟ್ಟ ಪ್ರಕರಣಗಳು ನಡೆದಿವೆ.ಅದೇ ರೀತಿ ಇಂತಹ ವಿಷಯಗಳು ನ್ಯಾಯಾಲಯದ ಮೆಟ್ಟಿಲೇರಿವೆ ಎಂದರು.ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಇನ್ನು ಮುಂದೆ ಪ್ರತಿ ವಾರ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಹಳ್ಳಿಗಳಿಗೆ ತೆರಳಿ ಸಮಸ್ಯೆಯನ್ನು ಸ್ಥಳದಲ್ಲೇ ಬಗೆಹರಿಸಲಿದ್ದಾರೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
