ಪರಿಕರ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ : ನ್ಯಾಯಾಧೀಶರಿಂದ ತನಿಖೆಗೆ ಕಾಂಗ್ರೆಸ್ ಒತ್ತಾಯ

ತುಮಕೂರು

     ಕೊರೊನಾ ನಿಯಂತ್ರಣ ಪರಿಕರ ಖರೀದಿಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ.ಗಳ ಅವ್ಯವಹಾರ ಆಗಿರುವುದು ಕಂಡು ಬಂದಿದ್ದು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥ ಮಂತ್ರಿಗಳು, ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಒತ್ತಾಯಿಸಿದರು.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಸಾಲದಕ್ಕೆ ಕೊರೊನ ನಿಯಂತ್ರಣ ಸಾಮಗ್ರಿ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ, ಸರ್ಕಾರದ ವೈಫಲ್ಯ, ಭ್ರಷ್ಟಾಚಾರವನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ಪಕ್ಷ ಎಲ್ಲಾ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

    ಯಾವುದೇ ಮುನ್ಸೂಚನೆ, ಪೂರ್ವ ತಯಾರಿ ಇಲ್ಲದೆ ಪ್ರಧಾನ ಮಂತ್ರಿಗಳು ಎರಡು ತಿಂಗಳ ಕಾಲ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದರು. ಇದರಿಂದಾದ ಕಷ್ಟಗಳನ್ನು ಸಹಿಸಿಕೊಂಡು ಜನ ಸಹಕರಿಸಿದರು. ಆದರೆ ಸರ್ಕಾರ ಕೊರೊನಾ ನಿಯಂತ್ರಣ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲಿಲ್ಲ ಎಂದು ಶಿವಶಂಕರ ರೆಡ್ಡಿ ಆರೋಪಿಸಿದರು.

    ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೆ ಇದೆ. ಸಾವುಗಳ ಸಂಖ್ಯೆಯೂ ಏರುತ್ತಿದೆ. ತಜ್ಞರ ಅಂದಾಜಿನಂತೆ ಆಗಸ್ಟ್ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟಬಹುದು, ಮೃತರ ಸಂಖ್ಯೆ 9 ಸಾವಿರ ದಾಟಲಿದೆ ಎಂಬ ಆತಂಕಕಾರಿ ಮಾಹಿತಿ ಇದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಎಲ್ಲಾ ಪ್ರತಿಪಕ್ಷಗಳು, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿದರು. ಆದರೆ ಸರ್ಕಾರ ಪರಿಣಾಮಕಾರಿ ಕಾಯಕ್ರಮ ರೂಪಿಸಿ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲವಾಯಿತು ಎಂದರು.

     ಜೊತೆಗೆ, ಔಷಧಿ, ಸ್ಯಾನಿಟೈಸರ್, ವೆಂಟಿಲೇಟರ್, ಮಾಸ್ಕ್ ಇನ್ನಿತರ ವಸ್ತುಗಳ ಖರೀದಿಯಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಮಾರುಕಟ್ಟೆ ದರಗಳಿಗಿಂತಾ ಹೆಚ್ಚಿನ ದರದಲ್ಲಿ ಖರೀದಿ ಮಾಡಲಾಗಿದೆ. ಇದರಿಂದ ಕೋಟ್ಯಾಂತರ ರೂ. ಮಧ್ಯವರ್ತಿಗಳ ಪಾಲಾಗಿದೆ. ವಿವಿಧ ಇಲಾಖೆಗಳಿಂದ ಕೋವಿಡ್ ಸಂಬಂಧ ಒಟ್ಟು 4200 ಕೋಟಿ ರೂ. ವ್ಯಯಿಸಲಾಗಿದೆ. ಖರ್ಚು ಮಾಡಿರುವ ಸುಮಾರು ನಾಲ್ಕು ಸಾವಿರ ಕೋಟಿಗೂ ಹೆಚ್ಚಿನ ಹಣದಲ್ಲಿ ಸುಮಾರು 2 ಸಾವಿರ ಕೋಟಿ ರೂ.ಗೂ ಅಧಿಕ ಭ್ರಷ್ಟಾಚಾರವಾಗಿದೆ. ಇದಕ್ಕೆ ಕಾರಣಕರ್ತರಾದ ಮಂತ್ರಿಗಳು ಯಾರು? ಇವರ ಜವಾಬ್ದಾರಿ ಇಲ್ಲವೆ? ಅಥವಾ ಇವರ ಗಮನಕ್ಕಿದ್ದೂ ನಡೆಯಿತೆ? ಇದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಶಿವಶಂಕರ ರೆಡ್ಡಿ ಒತ್ತಾಯಿಸಿದರು.

    ಈ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟ ನಡೆಸಲಿದೆ. ಸರ್ಕಾರ ಈ ಭ್ರಷ್ಟಾಚಾರವನ್ನು ಹೈಕೋಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಹಾಗೂ ಕೊರೊನಾ ನಿಯಂತ್ರಣ ಪರಿಕರ ಖರೀದಿ ಸಂಬಂಧ ಶ್ವೇತಪತ್ರ ಹೊರಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

     ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ದೇವರೇ ಗತಿ ಎಂದು ಆರೋಗ್ಯ ಮಂತ್ರಿ ಶ್ರೀರಾಮುಲು ಅವರೇ ಅಸಹಾಯಕ ಹೇಳಿಕೆ ನೀಡಿದ್ದಾರೆ. ಸರ್ಕಾರವೇ ಹೀಗೆ ಅಸಹಾಯಕವಾದರೆ ಜನ ಸಾಮಾನ್ಯರ ಗತಿ ಏನು? ಕೊರೊನಾ ನಿಯಂತ್ರಣವಾಗದಿದ್ದರೆ ಮುಂದೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂದು ಹೇಳಿದರು.

    ಎರಡೂವರೆ ತಿಂಗಳು ಲಾಕ್‍ಡೌನ್ ಆಗಿದ್ದಾಗ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಏನೂ ಮಾಡದೆ, ಈಗ ಗಂಭೀರ ಪರಿಸ್ಥಿತಿಗೆ ತಂದಿದೆ ಎಂದು ಟೀಕಿಸಿದರು.ಕೋವಿಡ್ ಸೋಂಕಿನಿಂದ ಸಾಯುವವರ ಜೊತೆಗೆ ನಾನ್ ಕೋವಿಡ್‍ನಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆರೋಗ್ಯ ಸೇವಾ ವ್ಯವಸ್ಥೆ ಇಲ್ಲ, ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲು ಮಡಿಕೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಬಡವರನ್ನು ಸುಲಿಗೆ ಮಾಡುತ್ತಿವೆ. ಹೀಗಿದ್ದೂ ಸರ್ಕಾರ ಯಾವುದರ ಬಗ್ಗೆಯೂ ಗಮನ ಹರಿಸದೆ ನಿರ್ಲಕ್ಷ ಮಾಡುತ್ತಿದೆ ಎಂದು ಹೇಳಿದರು.

   ಕೊರೊನದಿಂದ ಜನ ಸಾವು ನೋವು ಅನುಭವಿಸುತ್ತಿದ್ದರೆ, ಈ ಕಾಯಿಲೆ ಸರ್ಕಾರಕ್ಕೆ ಲಾಭ ಮಾಡುವ ಹಬ್ಬವಾಗಿದೆ ಎಂದು ಟೀಕಿಸಿದ ರಿಜ್ವಾನ್ ಅರ್ಷದ್, ಕೊರೊನಾ ನಿಯಂತ್ರಣ ವಸ್ತುಗಳ ಖರೀದಿ ಅವ್ಯವಹಾರವನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಮಾಜಿ ಸಚಿವ ಟಿಬಿ.ಜಯಚಂದ್ರ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅನೇಕ ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕೊರೊನಾ ನಿಯಂತ್ರಣಕ್ಕೆ ತಮ್ಮ ಸಲಹೆ, ಸಹಕಾರ ನೀಡಿದರು. ಖರೀದಿ ಅವ್ಯವಹಾರದ ಬಗ್ಗೆ 24 ಗಂಟೆಯೊಳಗೆ ಉತ್ತರ ಕೊಡುವುದಾಗಿ ಹೇಳಿದ ಮುಖ್ಯಮಂತ್ರಿಗಳು ಈವರೆಗೂ ಅದರ ಪ್ರಸ್ತಾಪ ಮಾಡುತ್ತಿಲ್ಲ ಎಂದು ಆಪಾದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮೇಯರ್ ಫರೀದಾ ಬೇಗಂ, ಮಾಜಿ ಶಾಸಕರಾದ ಷಫಿಅಹಮದ್, ಡಾ.ರಫಿಕ್ ಅಹಮದ್, ಷಡಕ್ಷರಿ, ಆರ್.ನಾರಾಯಣ್, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಕೆಪಿಸಿಸಿ ವಕ್ತಾರ ಮುರಳಿಧರ ಹಾಲಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap