ಬೆಂಗಳೂರು :
ರೈತರಿಗೆ ಸರಿಯಾಗಿ ವಿಮೆ ಪಾವತಿಸದ ಹಾಗೂ ಕೃಷಿ ಇಲಾಖೆಯ ಸಭೆಗಳಿಗೆ ಸರಿಯಾಗಿ ಹಾಜರಾಗಿ ಮಾಹಿತಿ ನೀಡದ ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿ ವಿರುದ್ಧ ನೊಟೀಸ್ ನೀಡುವಂತೆ ಕೃಷಿ ಇಲಾಖಾಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಕೃಷಿ ಸಚಿವರು ಶನಿವಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು ಎನ್.ಐ.ಸಿ ಹಾಗೂ ವಿಮಾ ಕಂಪೆನಿಗಳ ಮುಖ್ಯಸ್ಥರ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಬಜಾಜ್ ಅಲೈಯನ್ಸ್, ಭಾರತಿ ಎಎಕ್ಸ, ಫ್ಯೂಚರ್ ಜೆನರಲ್, ಯುನಿವರ್ಸಲ್ ಸೋಂಪೋ ಹೆಚ್.ಡಿ.ಎಫ್.ಸಿ. ಸೇರಿದಂತೆ ಇನ್ನಿತರೆ ವಿಮಾ ಕಂಪೆನಿಗಳ ಮುಖ್ಯಸ್ಥರು ಭಾಗವಹಿಸಿ ಬೆಳೆ ವಿಮೆ ಸಂಬಂಧ ಮಾಹಿತಿ ಹಾಗೂ ರೈತರ ಬ್ಯಾಂಕ್ ಖಾತೆಯಲ್ಲಾಗಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಆದರೆ ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿಯಿಂದ ಯಾರೊಬ್ಬ ಪ್ರತಿನಿಧಿಯಾಗಲೀ ಮುಖಸ್ಥರಾಗಲೀ ಸಭೆಯಲ್ಲಿ ಭಾಗವಹಿಸರಲಿಲ್ಲ.ಅಲ್ಲದೇ ಸರಿಯಾದ ಮಾಹಿತಿಯನ್ನು ಕೂಡ ಇಲಾಖೆಗೆ ನೀಡದಿರುವುದನ್ನು ಗಮನಿಸಿದ ಕೃಷಿ ಸಚಿವರು, ಈ ಕಂಪೆನಿ ವಿರುದ್ಧ ನೊಟೀಸ್ ನೀಡುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಯಾವೊದೋ ಒಂದೆರಡು ಕಂಪೆನಿಗಳು ಮಾಡುವ ತಪ್ಪಿಗೆ ಇಲಾಖೆಗೆ ಕೆಟ್ಟಹೆಸರು ಬರುವಂತೆ ಆಗುತ್ತದೆ. ಅಲ್ಲದೇ ಇನ್ಸೂರೆನ್ಸ್ ಕಂಪೆನಿಗಳು ಪ್ರೀಮಿಯಮ್ ಕಟ್ಟಿಸಿಕೊಳ್ಳುವಾಗ ಷರತ್ತುಗಳನ್ನು ಸಡಿಲಿಸಿ ಕ್ಲೇಮ್ ಮಾಡುವಾಗ ಷರತ್ತುಗಳನ್ನು ಬಿಗಿಗೊಳಿಸುವುದು ಸರಿಯಲ್ಲ. ಇಲ್ಲಿಯವರೆಗೆ ರೈತರಿಗೆ ವಿಮಾ ಹಣವನ್ನು ನೀಡದೇ ಬಾಕಿ ಉಳಿಸಿಕೊಂಡಿರುವ ವಿಮಾ ಕಂಪೆನಿಗಳು ಆದಷ್ಟುಬೇಗ ಹಣವನ್ನು ರೈತರ ಖಾತೆಗೆ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ರೈತರ ಖಾತೆಗಳಲ್ಲಿ ಏನಾದರೂ ತಾಂತ್ರಿಕ ತೊಂದರೆಗಳಾಗಿದ್ದರೆ ಅವುಗಳನ್ನು ರೈತರ ಗಮನಕ್ಕೂ ಹಾಗೂ ಇಲಾಖೆಯ ಗಮನಕ್ಕೂ ತಂದು ಸರಿಪಡಿಸಬೇಕು. ವಿಮಾ ಕಂಪೆನಿಗಳಿಗೆ ಸರಿಯಾಗಿ ಕಂತು ಪಾವತಿಸಿದ ಯಾವುದೇ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಬಿ.ಸಿ.ಪಾಟೀಲ್ ಹೇಳಿದರು.
50 ಸಾವಿರಕ್ಕೂ ಮೇಲ್ಪಟ್ಟ ಹಣ ರೈತರ ಖಾತೆಗೆ ಜಮೆ ಮಾಡಲು ಆರ್.ಬಿ.ಐ ನಿಯಮಾವಳಿ ಪ್ರಕಾರ ಕೆಲವು ಬ್ಯಾಂಕ್ ಗಳ ಖಾತೆಗಳಿಗೆ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಕೇಂದ್ರದ ಗಮನಕ್ಕೆ ತರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಹೇಳಿದರು.ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತ ಬ್ರಿಜೆಶ್ ಕುಮಾರ್ ದೀಕ್ಷಿತ್, ಅಪರ ಕೃಷಿ ನಿರ್ದೇಶಕ ಅಂತೋನಿ ಇಮ್ಯಾನ್ಯುಯಲ್ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ