ತುರುವೇಕೆರೆ:
ತಾಲೂಕಿನ ಹಲವು ಬಾಗಗಳಲ್ಲಿ ಭಾನುವಾರ ಸಂಜೆ ಸುರಿದ ಮೃಗಶಿರಾ ಮಳೆ ಆತಂಕಗೊಂಡಿದ್ದ ಅನ್ನದಾತನ ಮೊಗದಲ್ಲಿ ಇದೀಗ ಮಂದಹಾಸ ಮೂಡಿಸಿದೆ.
ತಾಲೂಕಿನಲ್ಲಿ ಇದುವರೆವಿಗೂ ಸರಿಯಾದ ಮಳೆ ಬಾರದೆ ಮುಂಗಾರು ಕುಂಠಿತಗೊಂಡು ರೈತರಲ್ಲಿ ಆತಂಕ ಮನೆಮಾಡಿತ್ತು. ಹೆಸರು, ಉದ್ದು, ಹಲಸಂಧಿ ಸೇರಿದಂತೆ ಮುಂಗಾರು ಬೆಳೆಗಳು ಚೊಟ್ಟಾಗುತ್ತಿದ್ದರಿಂದ ಮಳೆಯ ಕೊರತೆ ಎದುರಾಗಿತ್ತು. ಜೊತೆಜೊತೆಗೆ ಹೆಸರು ಗಿಡಕ್ಕೆ ಹಳದಿ ರೋಗ ಕಾಣಿಸಿಕೊಂಡಿದ್ದು ಇತ್ತ ಮಳೆಯೂ ಇಲ್ಲದ್ದರಿಂದ ಮುಂಗಾರು ಬಿತ್ತ ರೈತರಲ್ಲಿ ದುಗುಡ ಉಂಟಾಗಿತ್ತು.
ಸುಮಾರು ದಿನಗಳಿಂದ ಮಳೆ ಕಣ್ಣಾಮುಚ್ಚಾಲೆಯಾಡುತ್ತಿದ್ದರಿಂದ ಸಮ ಪ್ರಮಾಣದ ಮಳೆ ಮರೀಚಿಕೆಯಾಗಿದ್ದು ಮುಂಗಾರು ಬೆಳೆ ಕೈಕೊಟ್ಟಿತು ಎಂಬ ಆತಂಕದಲ್ಲಿದ್ದ ರೈತನಿಗೆ ಶನಿವಾರ ಹಾಗೂ ಭಾನುವಾರ ತಾಲ್ಲೂಕಿನ ಹಲವೆಡೆ ಬಿದ್ದ ಮೃಗಶಿರಾ ಮಳೆ ಭೂಮಿಯನ್ನು ತಂಪೆರೆಯಿತು. ಇದರಿಂದ ಮುಂಗಾರು ಬೆಳೆ ಕೈಗೆ ಬರಲಿದೆ ಎಂಬ ಆಶಾಭಾವನೆ ಇದೀಗ ರೈತರಲ್ಲಿ ಮೂಡಿದಂತಾಗಿದೆ. ಗುಡುಗು ಸಿಡಿಲು ಆರ್ಭಟ ಕಡಿಮೆಯಿದ್ದು ಗಾಳಿಯ ಪ್ರಮಾಣ ಅಷ್ಟೇನೂ ಜಾಸ್ತಿಯಿಲ್ಲದ್ದರಿಂದ ಯಾವುದೇ ಅವಘಡಗಳು ಸಂಭವಿಸಿಲ್ಲದಿರುವುದು ಜನತೆಗೆ ನಿರಾಳವೆನಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ