ಹಬ್ಬಕ್ಕೆ ಖರೀದಿ ಭರಾಟೆ: ಅಂತರ ಮರೆತ ಜನ

ಹುಳಿಯಾರು:

    ನಾಡ ಹಬ್ಬ ದಸರಾ ಇರುವುದರಿಂದ ಹಬ್ಬದ ತಯಾರಿಗಾಗಿ ಪಟ್ಟಣದಲ್ಲಿ ಜನರು ವಿವಿಧ ವಸ್ತುಗಳನ್ನು ಖರೀದಿಯಲ್ಲಿ ತೊಡಗಿಕೊಂಡಿದ್ದರು. ದಿನಸಿ, ಹೂವು, ಹಣ್ಣಿನ ಬೆಲೆ ಏರಿಕೆಯ ಬಿಸಿಗಿಂತ ಹಬ್ಬದ ಸಂಭ್ರಮದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮರೆತು ಇನರು ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು.

    ಪಟ್ಟಣದಲ್ಲಿ ಈ ಬಾರಿ ಹಿಂದಿಗಿಂತಲೂ ಹೆಚ್ಚಾಗಿ ಹೂವು, ಹಣ್ಣು, ಕುಂಬಳಕಾಯಿ, ಬಾಳೆಕಂದಿನ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಬೆಲೆಯೂ ಸಹ ದುಪ್ಪಟ್ಟಾಗಿದ್ದರೂ ಹಬ್ಬ ಮಾಡಲೇಬೇಕೆಂಬ ಆಶಯದಿಂದ ಚೌಕಾಸಿ ವ್ಯಾಪಾರ ಮಾಡಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಪಟ್ಟಣದ ಬಸ್ ನಿಲ್ದಾಣ, ರಾಜ್‍ಕುಮಾರ್ ರಸ್ತೆ, ಕರವೇ ಸರ್ಕಲ್‍ನಲ್ಲಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡು ಬಂದಿತಲ್ಲದೆ ಸೋಂಕಿನ ಪ್ರಮಾಣ ಇಳಿಮುಖವಾಗಿಯೇ ಬಿಟ್ಟಿದೆ ಎಂಬಂತೆ ಹಲವು ಅಂಗಡಿಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಮರೆತಂತಿದ್ದರು. ವ್ಯಾಪಾರಿಗಳೂ ಸಹ ಸ್ಯಾನಿಟೈಸರ್, ಸಾಮಾಜಿಕ ಅಂತರ ಗಾಳಿಗೆ ತೂರಿ ವ್ಯಾಪಾರ ಮಾಡುತ್ತಿದ್ದರು.

   ಮುಂಬರುವ ಸಾಲು ಸಾಲು ಹಬ್ಬಗಳ ಗುಂಗಿನಲ್ಲಿ ನೀವು ಮಾಸ್ಕ್, ಸಾಮಾಜಿ ಅಂತರವನ್ನು, ಆಗಾಗ ಕೈಗಳನ್ನು ತೊಳೆಯುವುದನ್ನು ಮರೆಯಬಾರದು. ಮರೆತರೆ ಕೊರೊನಾ ನಿಯಂತ್ರಣ ಕಷ್ಟಸಾಧ್ಯ ಎಂದು ಪ್ರಧಾನಮಂತ್ರಿಗಳು ಕೂಡ ಇತ್ತೀಚೆಗೆ ತಮ್ಮ ಭಾಷಣದ ಮೂಲಕ ಸಲಹೆ ನೀಡಿದ್ದ ರು.

   ಅಲ್ಲದೆ ರಾಜ್ಯ ಸರ್ಕಾರವು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡವನ್ನು ವಿಧಿಸಬೇಕು ಎಂದು ಸಂಬಂಧ ಪಟ್ಟವರಿಗೆ ಸೂಚನೆ ನೀಡಿತ್ತು. ಆದರೆ ಇದ್ಯಾವುದರ ಪರಿವೆ ಇಲ್ಲದೆ ಜನರು ಹೂವು, ಹಣ್ಣು, ಕುಂಬಳಕಾಯಿ, ಕಿರಾಣಿ ಅಂಗಡಿಗಳ ಮುಂದೆ ಖರೀದಿಗೆ ಮುಗಿಬಿದ್ದಿದ್ದರು.

   ಹುಳಿಯಾರು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕೊರೊನಾ ವೈರಸ್ ಸೋಂಕಿತರು ಹಾಗೂ ಸಾವಿನ ಪ್ರಮಾಣ ಇದ್ದರೂ ಕೂಡಾ, ಸೋಂಕು ಹರಡುವ ಭೀತಿಯ ನಡುವೆಯೇ ಜನರು ಹಬ್ಬದ ಸಂಭ್ರಮದಲ್ಲಿ ಆರೋಗ್ಯದ ಕಾಳಜಿ ಹಾಗೂ ಜಾಗೃತಿಯನ್ನೇ ಮರೆಯುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link