ತುಮಕೂರು
ನಗರದ ಮಂಡಿಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಗುಜರಿ ತ್ಯಾಜ್ಯ ಹಾಕಿದ್ದ ವ್ಯಾಪಾರಿಗಳಿಗೆ ನಗರ ಪಾಲಿಕೆ ಆಯುಕ್ತರಾದ ರೇಣುಕಾ ಅವರು ಗುರುವಾರ ತಲಾ ಒಂದು ಸಾವಿರ ರೂ. ದಂಡ ವಿಧಿಸಿದರು. ಕೂಡಲೇ ತ್ಯಾಜ್ಯ ತೆರವು ಮಾಡುವಂತೆ ಸೂಚನೆ ನೀಡಿದರು.
ಮಂಡಿಪೇಟೆ ಮುಖ್ಯ ರಸ್ತೆಯ ಮೀನು ಮಾರಾಟ ಕೇಂದ್ರದಲ್ಲಿ ವ್ಯಾಪಾರಿಗಳು ಸ್ವಚ್ಚತೆ ಕಾಪಾಡುತ್ತಿಲ್ಲ, ಮಾಂಸದ ತ್ಯಾಜ್ಯವನ್ನು ಚರಂಡಿಗಳಿಗೆ ಹಾಕುತ್ತಾರೆ, ಇದರಿಂದ ನಾಯಿ ಹಾವಳಿ, ದುರ್ವಾಸೆ ಬೀರುತ್ತದೆ ಎಂಬ ಸಾರ್ವಜನಿಕರಿಂದ ವ್ಯಾಪಕ ದೂರು ಬಂದಿದ್ದು ಸಮಸ್ಯೆ ನಿವಾರಿಸಲು ಸ್ಥಳಕ್ಕೆ ಭೇಟಿ ನೀಡುವಂತೆ 4ನೇ ವಾರ್ಡ್ ಪಾಲಿಕೆ ಸದಸ್ಯೆ ದೀಪಶ್ರೀ ಮಹೇಶ್ಬಾಬು ಅವರು ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಆಯುಕ್ತರಾದ ರೇಣುಕಾ, ಸದಸ್ಯರಾದ ಸೈಯದ್ ನಯಾಜ್, ದೀಪಶ್ರೀ ಮಹೇಶ್ಬಾಬು, ಜಿಯಾ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಮಾಂಸದ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳ, ಚರಂಡಿಯಲ್ಲಿ ಎಸೆಯಕೂಡದು, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಮೇಯರ್ ವ್ಯಾಪಾರಿಗಳಿಗೆ ಸೂಚನೆ ನೀಡಿದರು.
ಮೂರು ತಿಂಗಳಲ್ಲಿ ಮೀನು ಮಾರಾಟಕ್ಕೆ ಪ್ರತ್ಯೇಕ ಸ್ಥಳ ಗುರುತಿಸಿ, ಅಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಆ ಭಾಗದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಚಿಕ್ಕಪೇಟೆ ಪ್ರದೇಶದ ರಸ್ತೆಗಳು ಕಿರಿದಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ರಸ್ತೆಗಳು ಅನೇಕ ಕಡೆ ಒತ್ತುವರಿಯಾಗಿವೆ, ಅಂತಹ ಒತ್ತೂವರಿ ತೆರವು ಮಾಡಿ ರಸ್ತೆ ವಿಸ್ತರಣೆ ಮಾಡಬೇಕೆಂದು ಸದಸ್ಯೆ ದೀಪಶ್ರೀ ಮಹೇಶ್ಬಾಬು ಮನವಿ ಮಾಡಿದರು. ಈ ರಸ್ತೆಗಳ ಸರ್ವೆ ಮಾಡಿ, ಸ್ಥಳೀಯರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಮೇಯರ್ ಆಶ್ವಾಸನೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ