ಮಳೆಗೆ ಹೊಡೆತಕ್ಕೆ ನೆಲಕಚ್ಚಿದ ರಾಗಿ ಮತ್ತು ಸಾಮೆ ಬೆಳೆ

ಹುಳಿಯಾರು

    ಕಾಳು ಕಟ್ಟುವ ಹಂತದಲ್ಲಿ ಮಳೆಯಿಲ್ಲ ಎಂದು ಚಿಂತಾಕ್ರಾಂತರಾಗಿದ್ದ ರೈತರಿಗೆ ಕಳೆದ ಎರಡು ದಿನಗಳಿಂದ ಆಗಾಗ ಬಿಟ್ಟೂ ಬಿಡದಂತೆ ಸುರಿಯುತ್ತಿರುವ ಮಳೆ ಒಂದೆಡೆ ಸಂತಸಕ್ಕೆ ಕಾರಣವಾದರೆ ಮತ್ತೊಂದೆಡೆ ಮಳೆ ಹೊಡೆತಕ್ಕೆ ಸಿಕ್ಕಿ ತೆನೆ ಬಂದಿರುವ ರಾಗಿ ಮತ್ತು ಸಾಮೆ ಬೆಳೆ ನೆಲಕ್ಕೆ ಉರುಳಿ ಬಿದ್ದು ಆತಂಕಕ್ಕೆ ಕಾರಣವಾಗಿದೆ.

   ಲಾಕ್‍ಡೌನ್‍ನಿಂದಾಗಿ ಪಟ್ಟಣ ಸೇರಿದ್ದ ಯುವಕರು ಹಳ್ಳಿಗಳಿಗೆ ಮರಳಿ ಬಂದ ಪರಿಣಾಮ ಈ ಬಾರಿ ಹುಳಿಯಾರು ಸುತ್ತ ಮುತ್ತ ದಾಖಲೆಯ ರಾಗಿ ಬಿತ್ತನೆ ಆಗಿತ್ತು. ಕಳೆದ ತಿಂಗಳು ಉತ್ತಮವಾಗಿ ಮಳೆ ಬಂದಿದ್ದರಿಂದ ರೈತರು ಬೆಳೆಗೆ ಸಾಕಷ್ಟು ಯೂರಿಯಾ ಗೊಬ್ಬರ ಹಾಕಿದ್ದರು. ಇದರಿಂದ ರಾಗಿ ಬೆಳೆಯು ಹುಲುಸಾಗಿ ಬೆಳೆದಿತ್ತಲ್ಲದೆ ಹಲವೆಡೆ ಹೊಡೆ ಬಿಚ್ಚಿ ಮಳೆಯ ನಿರೀಕ್ಷೆಯಲ್ಲಿತ್ತು. ಅದೃಷ್ಟವಶತ್ ಕಳೆದ ವಾರದಿಂದ ಆಗಾಗ ಮಳೆ ಬೀಳುತ್ತಿದ್ದು ರೈತರ ಹರ್ಷಕ್ಕೆ ಕಾರಣವಾಗಿತ್ತು.

    ಆದರೆ ಮಂಗಳವಾರ ಮತ್ತು ಬುಧವಾರ ಬಿದ್ದ ಮಳೆಗೆ ಕೆಲವೆಡೆ ರಾಗಿ ಮತ್ತು ಸಾಮೆ ಬೆಳೆಗೆ ಮುಳುವಾಗಿ ಪರಿಣಮಿಸುತ್ತಿದೆ. ಕಣಜ ತುಂಬುವ ಭರವಸೆ ನೀಡಿದ್ದ ಬೆಳೆಗಳು ಮಳೆಯ ಹೊಡೆತಕ್ಕೆ ಅಲ್ಲಲ್ಲಿ ನೆಲಕ್ಕೆ ಉರುಳುತ್ತಿದೆ. ಅಲ್ಲದೆ ಮಳೆ ದಿನ ಬಿಟ್ಟು ದಿನ ಬರುತ್ತಿದ್ದು ಉಳಿದ ರಾಗಿ, ಸಾಮೆ ನೆಲಕ್ಕುರುಳುವ ಆತಂಕ ರೈತರನ್ನು ಆವರಿಸಿದೆ.

    ಹವಮಾನ ಇಲಾಖೆಯ ವರದಿಯ ಪ್ರಕಾರ ಇನ್ನೂ ಮೂರ್ನಲ್ಕು ದಿನಗಳು ಮಳೆ ಬೀಳುವ ಸಾಧ್ಯತೆಯಿದೆ. ಈ ಮಳೆ ಬಿದ್ದರೆ ಪೂರ್ವ ಬಿತ್ತನೆಯಾಗಿ ಕಾಳು ಕಟ್ಟಿರುವ ರಾಗಿ ಕಪ್ಪಾಗುವ ಸಾಧ್ಯತೆಯಿದೆ. ತೆನೆಯ ಭಾರಕ್ಕೆ ನೆಲಕ್ಕುರುಳಿ ಮಣ್ಣುಪಾಲಾಗುತ್ತದೆ. ಇದರಿಂದ ದುಬಾರಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಖರ್ಚುಗಳಿಂದಾಗಿ ಸಂಕಷ್ಟದಲ್ಲಿರುವ ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತ್ತಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link