ತುರುವೇಕೆರೆ
ಕೊಬ್ಬರಿಗೆ 10,300 ರೂ. ಬೆಂಬಲ ಬೆಲೆಯ ಜೊತೆಗೆ 2000 ರೂ.ಗಳನ್ನು ಹೆಚ್ಚುವರಿ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸೋಮವಾರ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೇವಲ 10,300 ರೂ.ನಂತೆ ಕೊಬ್ಬರಿ ಖರೀದಿ ಮಾಡುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಇದರಿಂದ ರೈತ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದನ್ನು ಮನಗಂಡು ಜಿಲ್ಲಾ ಉಸ್ತುವಾರಿ ಸಚಿವರು, ತಿಪಟೂರು ಶಾಸಕ ನಾಗೇಶ್ ಒಳಗೊಂಡಂತೆ ನಾವುಗಳು ಈಗಾಗಲೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ ಎಂದರು.
ನ್ಯಾಫೆಡ್ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ನೀಡುವ ಮೂಲಕ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನಾ ಸೋಂಕು ನಿವಾರಣೆಗೆ ನಾವೆಲ್ಲಾ ಕೈ ಜೋಡಿಸೋಣ ಎಂದರು.
ನ್ಯಾಫೆಡ್ ಖರೀದಿ ಕೇಂದ್ರದ ಅಧಿಕಾರಿ ಶಂಕರ್ ರೆಡ್ಡಿ ಮಾತನಾಡಿ, ನೋಂದಣಿ ಮಾಡಿಸುವ ರೈತರು ರೈತ ಸಂಪರ್ಕ ಕೇಂದ್ರಕ್ಕೆ ತಮ್ಮ ಆಧಾರ್ ಕಾರ್ಡ್ ತೋರಿಸಿ ಫ್ರೂಟ್ಸ್ ದತ್ತಾಂಶದಲ್ಲಿ ನೋಂದಣಿ ಮಾಡಿದ ಐ.ಡಿ. ನಂಬರ್ ಪಡೆದು ಖರೀದಿ ಕೇಂದ್ರದಲ್ಲಿ ದಿನಾಂಕ ನಿಗದಿ ಪಡಿಸುವುದು. ಕೊಬ್ಬರಿಯನ್ನು ನೇರವಾಗಿ ರೈತರು ಖರೀದಿ ಕೇಂದ್ರಕ್ಕೆ ತರುವುದು. ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನ್ನದ ಮೌಲ್ಯದ ಹಣವನ್ನು ಡಿ.ಬಿ.ಟಿ. ಮೂಲಕ ಜಮಾ ಆಗುವಂತೆ ಪಾವತಿಸಲಾಗುವುದು.
ಚೀಲ ಸೇರಿದಂತೆ 41.200 ಗ್ರಾಂ. ತೂಕವಿರುವ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿ ಕೇಂದ್ರಕ್ಕೆ ತರುವಂತೆ ರೈತರಿಗೆ ಹೇಳಿದರು.ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಮಾಚೇನಹಳ್ಳಿ ಲೋಕೇಶ್, ಸದಸ್ಯರುಗಳಾದ ನರಸಿಂಹರಾಜು, ಪ್ರಸನ್ನಕುಮಾರ್, ವಿಜಯ್‍ಕುಮಾರ್, ವಿ.ಟಿ.ವೆಂಕಟರಾಮು, ಬಿ.ಎಸ್.ದೇವರಾಜು, ರೇಣುಕಪ್ಪ, ಇಂದ್ರಮ್ಮ, ನಾಗರಾಜಯ್ಯ, ರಾಮಚಂದ್ರು, ಖರೀದಿ ಕೇಂದ್ರದ ಗ್ರೇಡರ್ ಮಹದೇವಸ್ವಾಮಿ, ಚನ್ನಪ್ಪ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








