ನಿವಾಸಿಗಳ ಪ್ರತಿರೋಧದ ನಡುವೆಯೂ ರಸ್ತೆ ಅಗಲೀಕರಣ

ಚಳ್ಳಕೆರೆ

        ನಗರದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿರುವ ಚಿತ್ರಯ್ಯನಹಟ್ಟಿಯ ಪ್ರಧಾನ ರಸ್ತೆ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ಹಾಗೂ ಈ ರಸ್ತೆಯಲ್ಲಿ ಅಪಘಾತ ಹಾಗೂ ಇನ್ನಿತರೆ ಘಟನೆಗಳನ್ನು ನಿಯಂತ್ರಿಸಲು ನಗರಸಭೆ ಈ ರಸ್ತೆಯನ್ನು ವಿಸ್ತರಣೆ ಮಾಡಲು ನಿರ್ಧರಿಸಿದ್ದು, ರಸ್ತೆ ವಿಸ್ತರಣಾ ಕಾರ್ಯ ಪ್ರಾರಂಭವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಬಳ್ಳಾರಿ ರಸ್ತೆಯಿಂದ ಚಿತ್ರಯ್ಯನಹಟ್ಟಿಯ ಸಂಪರ್ಕ ರಸ್ತೆ ಅಗಲೀಕರಣಗೊಳ್ಳಲಿದೆ ಎಂದು ಪೌರಾಯುಕ್ತ ಪಿ.ಪಾಲಯ್ಯ ತಿಳಿಸಿದರು.

       ಕಳೆದ ಕೆಲವು ವರ್ಷಗಳಿಂದ ಈ ಭಾಗದ ಸಾವಿರಾರು ಜನರು ಪ್ರತಿನಿತ್ಯ ಓಡಾಡಲು ಈ ಪ್ರಧಾನ ರಸ್ತೆಯನ್ನೇ ಹೆಚ್ಚು ಬಳಸುತ್ತಿದ್ದು, ಕೆಲವೊಂದು ಸಂದರ್ಭಗಳಲ್ಲಿ ಎದುರಿಗೆ ಯಾವುದಾದರೂ ವಾಹನ ಬಂದರೆ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆಗೆ ನಗರಸಭೆ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಈ ಹಿಂದೆ ಈ ಕಾಮಗಾರಿಗೆ ಚಾಲನೆ ನೀಡಿದಾಗ ಇಲ್ಲಿನ ಅನೇಕ ನಿವಾಸಿಗಳು ಆಕ್ರೋಶ ಹಾಗೂ ಅಸಮದಾನ ವ್ಯಕ್ತ ಪಡಿಸಿದ್ದರು. ನಂತರ ಎಲ್ಲರೊಂದಿಗೆ ಸಭೆ ಸೇರಿ ರಸ್ತೆ ವಿಸ್ತರಣೆ ಕಾಮಗಾರಿಗೆ ಸಹಹಾರ ನೀಡುವಂತೆ ಮನವಿ ಮಾಡಿದ್ದು, ರಸ್ತೆ ವಿಸ್ತರಣೆ ಕಾರ್ಯ ಈಗ ಆರಂಭವಾಗಿದೆ.

      ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಜೆ.ಶಾಮಲ, ವಿನಯ್, ಸಹಾಯಕ ಇಂಜಿನಿಯರ್ ಲೋಕೇಶ್, ಕಂದಾಯಾಧಿಕಾರಿ ವಿ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ಮತ್ತು ಸಿಬ್ಬಂದಿ ವರ್ಗ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಮನೆಗಳನ್ನು ಕೆಡವಲು ಹೋದಾಗ ಮನೆಯವರು ಕಳೆದ 50 ವರ್ಷಗಳಿಂದ ನಾವು ಇಲ್ಲಿ ವಾಸವಿದ್ದು, ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗುವುದಿಲ್ಲವೆಂದು ಪಟ್ಟು ಹಿಡಿದರು. ನಗರಸಭೆ ಸಿಬ್ಬಂದಿ ಹಾಗೂ ಅಲ್ಲಿನ ನಿವಾಸಿಗಳ ಜೊತೆಗೆ ಮಾತಿನ ಚಕುಮುಕಿ ನಡೆದ ಸಂದರ್ಭದಲ್ಲಿ ಪಿಎಸ್‍ಐ ರಾಘವೇಂದ್ರ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ದಾವಿಸಿ ನಿವಾಸಿಗಳಿಗೆ ಸಮದಾನ ಹೇಳಿ ಕಳುಹಿಸಿದರು. ರಸ್ತೆ ವಿಸ್ತರಣಾ ಕಾರ್ಯ ಬರದಿಂದ ಸಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಚಿತ್ರಯ್ಯನಹಟ್ಟಿಯ ನಿವಾಸಿಗಳು ನವೀಕೃತಗೊಂಡ ಹೊಸ ವಿಸ್ತರಣೆಗೊಂಡ ರಸ್ತೆಯಲ್ಲೇ ಓಡಾಡಬಹುದಾಗಿದೆ. ನಗರಸಭಾ ಸದಸ್ಯರಾದ ವೆಂಕಟೇಶ್, ಕವಿತಾಬೋರಣ್ಣ, ನಗರಸಭೆ ಮಾಜಿ ಅಧ್ಯಕ್ಷೆ ಬೋರಮ್ಮ, ವ್ಯವಸ್ಥಾಪಕ ಲಿಂಗರಾಜು ಮುಂತಾದವರು ಉಪಸ್ಥಿತರಿದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link