ಬೆಂಗಳೂರು
ಆಡಳಿತದಲ್ಲಿರುವ ಬಿಜೆಪಿರೂಢ ಅಧಿಕೃತ ಸರ್ಕಾರ ದುರ್ಬಲಗೊಳ್ಳುತ್ತಿದ್ದು, ಅನಧಿಕೃತ ಸಂಘಿ ಬಲಗೊಳ್ಳುತ್ತಿದೆ ಎಂದು ಉಲ್ಲೇಖಿಸುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಪಠ್ಯಕ್ರಮ ಬದಲಾವಣೆಯನ್ನು ಟೀಕಿಸಿದ್ದಾರೆ.10ನೇ ತರಗತಿ ಪಠ್ಯದಿಂದ ಕೆಲವು ಮಹಾಪುರುಷರಿಗೆ ಸಂಬಂಧಿಸಿದ ಪಾಠವನ್ನು ಕೈಬಿಟ್ಟದ್ದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ಪಠ್ಯಪುಸ್ತಕ ಸಮಿತಿ ಸರ್ಕಾರಕ್ಕಿಂತಲೂ ಉನ್ನತ ಸಂಸ್ಥೆಯೇ ?ಎಂದು ಪ್ರಶ್ನಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪಠ್ಯಕ್ರಮದಿಂದ ಮಹಾಪುರುಷರ ಪಠ್ಯವನ್ನು ಕೈಬಿಟ್ಟಿರುವುದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರ ಪಠ್ಯಕ್ರಮದ ಹಿಂದಿರುವ ತನ್ನ ಕಾರ್ಯಸೂಚಿ ಏನು? ಎನ್ನುವುದನ್ನು ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಮೊದಲಾದವರಿಗೆ ಸಂಬಂಧಿಸಿದ ಪಠ್ಯವನ್ನು ಹತ್ತನೇ ತರಗತಿಯ ಪಠ್ಯಕ್ರಮದಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಕೊರೊನಾ ನಿಯಂತ್ರಿಸಲಾಗದ ರಾಜ್ಯಸರ್ಕಾರ, ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಿ ಗುಪ್ತ ಅಜೆಂಡಾ ಅನುಷ್ಠಾನಗೊಳಿಸಲು ಹೊರಟಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಈ ಹುನ್ನಾರವನ್ನು ಸಹಿಸಲಾಗದು. ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರಗಳಿಂದ ನಡೆಯುತ್ತಿರುವ ಗೋವು ಸಾಗಾಟಗಾರರ ಮೇಲಿನ ಹಲ್ಲೆ ದರೋಡೆ ಕೃತ್ಯಗಳ ಬಗ್ಗೆ ಧ್ವನಿಎತ್ತಿದ್ದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿರುವುದನ್ನು ಖಂಡಿಸಿರುವ ಸಿದ್ದರಾಮಯ್ಯ, ಕೊರೊನಾ ಅಕ್ರಮ ಬಯಲಿಗೆಳೆದರೆ ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡಲಾಗುತ್ತದೆ ಎಂದು ದೂರುವ ಸರ್ಕಾರ ಮೊದಲು, ಭ್ರಷ್ಟರ ರಕ್ಷಣೆಗಾಗಿ ಬಿಬಿಎಂಪಿ ಆಯುಕ್ತರ ವರ್ಗಾವಣೆ ಮಾಡಿ, ಈಗ ಕೋಮುವಾದಿ ಪುಂಡರ ರಕ್ಷಿಸಲು ದ.ಕ.ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿದೆ. ಇದೇ ಸರ್ಕಾರದ ಕೊರೊನಾ ವಿರುದ್ಧದ ಹೋರಾಟವೇ ಎಂದು ಪ್ರಶ್ನಿಸಿದ್ದಾರೆ.
ಒಂದು ಕಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ವಾರಿಯರ್ಸ್‍ಗೆ ಆಕಾಶದಿಂದ ಹೂಮಳೆ ಸುರಿಸಿ, ಇನ್ನೊಂದೆಡೆ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ