ಕಿರುನೀರು ಸರಬರಾಜು ಯೋಜನೆಯಡಿ ಅನುಧಾನ ದುರ್ಬಳಕೆಯಾದರೆ ಕಟ್ಟುನಿಟ್ಟಿನ ಕ್ರಮ : ಸಚಿವ ಜೆ.ಸಿ.ಮಾಧುಸ್ವಾಮಿ

ಶಿರಾ

   ಸರ್ಕಾರದ ವ್ಯಾಪಕ ಅನುದಾನ ಸೋರಿಕೆಯಾಗುತ್ತಿರುವುದು ಕಿರು ನೀರು ಸರಬರಾಜು ಯೋಜನೆಯಡಿಯಲ್ಲಿ ಎಂಬುದು ನಮ್ಮ ಅರಿವಿಗೆ ಬಂದಿದೆ. ಓವರ್ ಹೆಡ್ ಟ್ಯಾಂಕ್ ಇರುವಂತಹ ಗ್ರಾಮಗಳಲ್ಲಿ ಸಿಸ್ಟನ್‍ಗಳ ಅಗತ್ಯವಿಲ್ಲವಾದರೂ ಅನುದಾನ ದುರ್ಬಳಕೆಗೆ ಆ ಕೆಲಸ ಮಾಡಬೇಡಿ. ಅನುದಾನ ದುರ್ಬಳಕೆಯಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

     ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2019-20ನೇ ಸಾಲಿನ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      2019-20ನೇ ಸಾಲಿಗೆ ಸಂಬಂಧಿಸಿದಂತೆ 75 ಕೆರೆಗಳ ಆಧುನೀಕರಣ ಕಾಮಗಾರಿಗೆ ಅನುಮೋಧನೆ ಲಭ್ಯವಾಗಿದ್ದು ಈ ಪೈಕಿ 51 ಕಾಮಗಾರಿಗಳು ಪೂರ್ಣಗೊಂಡು 2 ಕಮಗಾರಿ ಪ್ರಗತಿಯಲ್ಲಿದ್ದು 22 ಕಾಮಗಾರಿಗಳನ್ನು ಪ್ರಾಂಭಿಸಬೇಕಿದೆ. 2 ನೂತನ ಕೆರೆಗಳ ನಿರ್ಮಾಣದ ಪೈಕಿ 1 ಕಾಮಗಾರಿ ಪೂರ್ಣಗೊಂಡಿದ್ದು ಮತ್ತೊಂದು ಕಾಮಗಾರಿ ಆರಂಭಗೊಳ್ಳಬೇಕಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ರವಿಚಂದ್ರ ಸಭೆಗೆ ತಿಳಿಸಿದರು.

      ಗಿರಿಜನ ಉಪಯೋಗ ಯೋಜನೆಯಡಿಯಲ್ಲಿ 306.00 ಲಕ್ಷ ರೂಗಳ 14 ಚೆಕ್ ಡ್ಯಾಂಗಳ ಪೈಕಿ 3 ಚೆಕ್ ಡ್ಯಾಂ ಪೂರ್ಣಗೊಂಡಿದ್ದು 7 ಕಾಮಗಾರಿ ಕೈಬಿಡಲಾಗಿದೆ. 4 ಕಾಮಗಾರಿಗಳನ್ನು ಆರಂಭಿಸಬೇಕಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ತಿಳಿಸಿದರು.
ಎಲ್ಲಿಯೇ ಆಗಲಿ ನೀರಿನ ಸಾಕಷ್ಟು ಪೂರೈಕೆ ಇರುವ ಗ್ರಾಮಗಳಲ್ಲಿ ಓವರ್‍ಹೆಡ್ ಟ್ಯಾಂಕ್ ಇದ್ದರೆ ಅಲ್ಲಿ ಕಿರು ನೀರು ಸರಬರಾಜಿನ ಸಿಸ್ಟನ್ ಅಗತ್ಯವಿರುವುದಿಲ್ಲ ಎಂಬುದು ಎಲ್ಲರಿಗೂ ಅರ್ಥವಾಗೋ ವಿಚಾರ ಆದರೆ, ನೀವು ಅನುಧಾನ ದುರ್ಬಳಕೆ ಮಾಡಲು ವಿನಾ ಕಾರಣ ಅಗತ್ಯವಿಲ್ಲದ ಕಡೆ ಸಿಸ್ಟನ್ ಕೂರಿಸುವುದು, ಪೈಪ್‍ಲೈನ್ ನೆಪದಲ್ಲಿ ಅನುಧಾನ ಬಳಸುವುದು ಸಾಧುವಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಚಿವರು ತಿಳಿ ಹೇಳಿದರಲ್ಲದೆ ರಾಜ್ಯದ ಯಾವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೇ ಆಗಲಿ ಅನುಧಾನ ದುರ್ಬಳಕೆ ಮಾಡಿರುವುದು ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಕ್ಕಳ ಮನೆಗೆ ಆಹಾರ ನೀಡಿಲ್ಲ:

      ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆಹಾರ ಪಡಿತರವನ್ನು ಮಕ್ಕಳ ಮನೆಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಅಕ್ಷರ ದಾಸೋಹ ನಿರ್ದೇಶಕರು ಸಭೆಗೆ ತಿಳಿಸಿದಾಗ ಆಹಾಡ ಪಡಿತರವನ್ನು  ನೇರವಾಗಿ ಶಾಲಾ ಮಕ್ಕಳ ಮನೆಗೆ ತಾವು ತಲುಪಿಸಿರುವಂತೆ ಕಾಣುತ್ತಿಲ್ಲ. ಶಾಲೆಗೆ ಕರೆಸಿಕೊಂಡು ನೀಡಿದ ಬಗ್ಗೆ ಮಾಹಿತಿ ಇದೆ. ಆ ಕೆಲಸ ಮಾಡಬೇಡಿ ಎಂದು ಸಚಿವರು ತಾಕೀತು ಮಾಡಿದರು.

ರಸ್ತೆ ಕಾಮಗಾರಿ ಕುಂಠಿತ:

    ಲೋಕೋಪಯೋಗಿ ಇಲಾಖೆಯು ಸಭೆಗೆ ಒದಗಿಸಿದ ಅಪೂರ್ಣ ಕಾಮಗಾರಿಗಳ ವಿವರವನ್ನು ಕಂಡ ಸಚಿವರು ಸದರಿ ಇಲಾಖೆಯ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. 2018-19ನೇ ಸಾಲಿನ ಬಹುತೇಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಇನ್ನೂ ಆರಂಭಗೊಂಡೇ ಇಲ್ಲದ್ದನ್ನು ಕಂಡ ಸಚಿವರ ಸಭೆಯಲ್ಲಿದ್ದ ಅಧಿಕಾರಿಯನ್ನು ಪ್ರಶ್ನಿಸಿದಾಗ ಸದರಿ ಅಧಿಕಾರಿಯ ಉತ್ತರ ಕಂಡು ಸಚಿವರೇ ತಲ್ಲಣಗೊಂಡರು.

     2018-19ರಲ್ಲಿ ರಸ್ಯೆತಲ್ಲಿ ಅತಿಹೆಚ್ಚು ಮಳೆಯ ನೀರು ನಿಂತುಕೊಮಡಿದ್ದರಿಂದ ಕಾಮಗಾರಿ ಕೈಗೊಳ್ಳಲು ತಡವಾಗಿದೆ ಎಂಬ ಅಧಿಕಾರಿಯ ಹಾರಿಕೆಯ ಉತ್ತರ ಸಚಿವರ ಕೋಪಕ್ಕೂ ಕಾರಣವಾಯಿತು. 2018-19ರಲ್ಲಿ ಇಡೀ ಶಿರಾ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿತ್ತಾದರೂ ರಸ್ತೆಯಲ್ಲಿ ಎರಡು ವರ್ಷಗಳವರೆಗೆ ನೀರು ನಿಂತಿದ್ದಾದರೂ ಹೇಗೆ ಎಂಬುದು ಸಭೆಯಲ್ಲಿದ್ದವರಿಗೂ ಅಚ್ಚರಿ ತಂದಿತು.

    ಇಂತಹ ಉಡಾಫೆಯ ಉತ್ತರ ನೀಡುವ ಮೊದಲು ಕಾಮಗಾರಿ ಆರಂಭಿಸಿ ಎಂದು ಸಚಿವರು ಲೋಪಯೋಗಿ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.ಶಿರಾ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳಿಗೆ ಸಾಕಷ್ಟು ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ. ಸರ್ಕಾರವನ್ನು ಬೆನ್ನು ಹತ್ತಿ ಶಾಸಕ ಬಿ.ಸತ್ಯನಾರಾಯಣ್ ಸಾಕಷ್ಟು ರಸ್ತೆಗಳಿಗೆ ಕೋಟ್ಯಾಂತರ ರೂಗಳ ಅನುಧಾನವನ್ನು ರಸ್ತೆ ಅಭಿವೃದ್ಧಿಗೆ ತಂದಿದ್ದಾರೆ. ಮೊದಲು ಅಂತಹ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿ ಎಂದು ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿ,ಪಂ. ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್, ತಹಶೀಲ್ದಾರ್ ಶ್ರೀಮತಿ ನಾಹಿದಾ ಜಮ್ ಜಮ್, ಜಿ.ಪಂ. ಸದಸ್ಯ ಜಯಪ್ರಕಾಶ್, ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ, ಜಿ.ಪಂ. ಉಪ ಕಾರ್ಯದರ್ಶಿ ರಮೇಶ್, ತಾ.ಪಂ. ಇ.ಓ. ಮೋಹನ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link