ಚಳ್ಳಕೆರೆ
ಚಳ್ಳಕೆರೆ ನಗರವೂ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನಗಳ ಮತ್ತು ಸಾರ್ವಜನಿಕರ ಓಡಾಟ ಹೆಚ್ಚಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು, ಶನಿವಾರ ಬೆಳಗಿನ ಜಾವ ಇಲ್ಲಿನ ನೆಹರೂ ಸರ್ಕಲ್‍ಗೆ ಅನಿರೀಕ್ಷಿತ ಭೇಟಿ ನೀಡಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸುಮಾರು 2 ಗಂಟೆಗಳ ಕಾಲ ಓಡಾಟ ನಡೆಸಿ ಇಲ್ಲಿನ ಇಂದಿರಾ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿರುವುದನ್ನು ಕಂಡು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ವಾಹನ ಮತ್ತು ಜನರ ಓಡಾಟವನ್ನು ನಿಯಂತ್ರಿಸಿದಲ್ಲಿ ಮಾತ್ರ ಎಲ್ಲರ ಪ್ರಯತ್ನಗಳು ಸಫಲವಾಗುವುದು ಎಂದರು.
ಇದೇ ಸಂದರ್ಭದಲ್ಲಿ ಯಾವುದೇ ಅನುಮತಿ ಇಲ್ಲದೆ ಓಡಾಡುತ್ತಿದ್ದ 6 ಕಾರು ಹಾಗೂ 10 ಮೋಟಾರ್ ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ಧಾರೆ. ಇನ್ನು ಮುಂದೆ ರಸ್ತೆ ಮೇಲೆ ಓಡಾಡುವ ಎಲ್ಲಾ ವಾಹನಗಳನ್ನು ಮತ್ತು ವಿತರಣೆ ಮಾಡಿರುವ ಪಾಸ್‍ಗಳನ್ನು ಸಹ ಕೂಲಂಕುಷವಾಗಿ ಪರಿಶೀಲಿಸಿದ ನಂತರ ಎಲ್ಲಾ ದಾಖಲಾತಿಗಳು ಸರಿ ಇದ್ದಲ್ಲಿ ಮಾತ್ರ ವಾಹನ ಬಿಟ್ಟುಕಳುಹಿಸಬೇಕು, ಇಲ್ಲವಾದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಬೇಕೆಂದರು. ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಈ.ಆನಂದ, ಪಿಎಸ್‍ಐಗಳಾದ ನೂರ್ ಆಹಮ್ಮದ್, ರಾಘವೇಂದ್ರ, ಪೌರಾಯುಕ್ತ ಪಿ.ಪಾಲಯ್ಯ,ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
