ತುಮಕೂರು
ಕೊರೊನಾ ಸೋಂಕಿನ ಭೀತಿಯ ನಡುವೆ ಶಿಕ್ಷಣ ಇಲಾಖೆ ಈ ತಿಂಗಳ 25ರಿಂದ ಜುಲೈ 4ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಅಗತ್ಯ ಎಚ್ಚರಿಕೆ ಕ್ರಮಗಳೊಂದಿಗೆ ಸಜ್ಜಾಗಿದೆ. ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಒಟ್ಟು 144 ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸಿಂಗ್ ಮಾಡಿ ಸಿದ್ಧಗೊಳಿಸಲಾಗುತ್ತಿದೆ.
ತುಮಕೂರು ಶೈಕ್ಷಣಿಕ ಜಿಲ್ಲೆಯ 23,782 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13,523 ಸೇರಿ ಒಟ್ಟು 37,306 ವಿದ್ಯಾರ್ಥಿಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 20,329 ಬಾಲಕರು, 16,977 ಬಾಲಕಿಯರಿದ್ದಾರೆ. ಇವರಲ್ಲಿ ಪ್ರಥಮವಾಗಿ ಪರೀಕ್ಷೆ ಬರೆಯುವ 34,366, ಪುನರಾವರ್ತಿತ 2082 ವಿದ್ಯಾರ್ಥಿಗಳಿದ್ದಾರೆ. ಜೊತೆಗೆ 587 ಖಾಸಗಿ ಹಾಗೂ 209 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.
ಕೊರೊನಾ ಸೋಂಕು ತಡೆ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳ ಎಲ್ಲಾ 144 ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆ. ತುಮಕೂರು ನಗರದ ಪರೀಕ್ಷಾ ಕೇಂದ್ರಗಳನ್ನು ನಗರ ಪಾಲಿಕೆಯಿಂದ ಸ್ಯಾನಿಟೈಸರ್ ಮಾಡಲಾಯಿತು. ಪಾಲಿಕೆಯ ಪೌರಕಾರ್ಮಿಕರು ಮಂಗಳವಾರ ಬೆಳಗಿನಿಂದಲೇ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಿದರು.
ಮೇಯರ್ ಫರೀದಾ ಬೇಗಂ, ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಡಿಡಿಪಿಐ ಎಂ.ಆರ್.ಕಾಮಾಕ್ಷಿ ಹಾಗೂ ಆಯಾ ಪಾಲಿಕೆ ಸದಸ್ಯರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಎಸ್ಐಟಿ ಬಡಾವಣೆಯ 26ನೇ ವಾರ್ಡಿನ ವಾಸವಿ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಡಿಡಿಪಿಐ ಕಾಮಾಕ್ಷಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ತಿಳಿಸಿದರು.
ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಯಾವುದೇ ಆತಂಕಪಡುವುದು ಬೇಡ, ಆದರೆ, ಸೋಂಕಿನ ವಿರುದ್ಧ ಜಾಗೃತಿ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು ಹಾಗೂ ಪೋಷಕರೂ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಡಿಡಿಪಿಐ ಕಾಮಾಕ್ಷಿ ಮನವಿ ಮಾಡಿದರು.
ನಗರ ಪಾಲಿಕೆ ಮೇಯರ್ ಮಾತನಾಡಿ, ಸುರಕ್ಷತೆ ದೃಷ್ಟಿಯಿಂದ ತುಮಕೂರು ನಗರ ವ್ಯಾಪ್ತಿಯ ಎಲ್ಲಾ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳನ್ನು ಪಾಲಿಕೆ ವತಿಯಿಂದ ಸ್ಯಾನಿಟೈಸ್ ಮಾಡಲಾಗಿದೆ. ಪರೀಕ್ಷೆಗಳು ಸುರಕ್ಷಿತವಾಗಿ, ಸುಸೂತ್ರವಾಗಿ ನಡೆಯಬೇಕು ಅದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಇಲಾಖೆ ಅಗತ್ಯ ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ಪೋಷಕರೂ ತಮ್ಮ ಮಕ್ಕಳ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇಕು, ಕಾಯಿಸಿ ಆರಿಸಿದ ನೀರನ್ನೂ ಮನೆಯಿಂದಲೇ ಮಕ್ಕಳು ತರುವ ವ್ಯವಸ್ಥೆ ಮಾಡಬೇಕು ಎಂದರು.ತಮ್ಮ ವಾರ್ಡ್ ವ್ಯಾಪ್ತಿಯ ವಾಸವಿ ಶಾಲೆ ಪರೀಕ್ಷಾ ಕೇಂದ್ರವನ್ನು ಸಂಪೂರ್ಣ ಸೋಂಕು ನಿವಾರಣ ದ್ರಾವಣ ಸಿಂಪಡಿಸಿ ಸುರಕ್ಷತೆಗೊಳಿಸಲಾಗಿದೆ. ಇನ್ನಾವುದೇ ಅಗತ್ಯ ಕಾರ್ಯಗಳಿಗೆ ಕೈಜೋಡಿಸಲು ಸಿದ್ಧ ಎಂದು 26ನೇ ವಾರ್ಡ್ ನಗರಪಾಲಿಕೆ ಸದಸ್ಯ ಹೆಚ್.ಮಲ್ಲಿಕಾರ್ಜುನ್ ಹೇಳಿದರು.
ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲೇ ಆರೋಗ್ಯ ತಪಾಸಣಾ ಘಟಕ ಸ್ಥಾಪಿಸಿ, ಪರೀಕ್ಷಾ ಕೇಂದ್ರ ಪ್ರವೇಶಿಸುವ ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಿರುವುದನ್ನು ಖಾತರಿಪಡಿಸಿಕೊಂಡು, ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕಳಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಬಳಿ ದೈಹಿಕ ಶಿಕ್ಷಣ ಶಿಕ್ಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷೆಗಳು ನಿಗಧಿತ ದಿನ ಬೆಳಿಗ್ಗೆ 10.30ರಿಂದ ಆರಂಭವಾಗುತ್ತವೆ. ವಿದ್ಯಾರ್ಥಿಗಳು ಮುಂಚಿತವಾಗಿ ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ. ಈ ವೇಳೆ ಅವರು ಪರೀಕ್ಷಾ ಕೊಠಡಿಯೊಳಗೆ ಅಧ್ಯಯನ ಮಾಡಿಕೊಳ್ಳಬಹುದು. ಅಗತ್ಯವಿದ್ದರೆ ಪರೀಕ್ಷೆ ಆರಂಭದ ಮುನ್ನಾ ದಿನ ಬುಧವಾರ ಪರೀಕ್ಷಾ ಕೇಂದ್ರಕ್ಕೆ ತೆರಳಿ ಅಲ್ಲಿ ತಮ್ಮ ರಿಜಿಸ್ಟ್ರೇಷನ್ ನಂಬರ್ ಇರುವ ಕೊಠಡಿ, ಜಾಗ ಖಚಿತಪಡಿಸಿಕೊಂಡು ಬರಬಹುದು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕಟ್ಟಡ, ಕೊಠಡಿ ಬಗ್ಗೆ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಆಯಾ ಶಾಲಾ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಪರೀಕ್ಷೆ ದಿನ ಆಗಬಹುದಾದ ನೂಕುನುಗ್ಗಲು ತಡೆಯಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ತುಮಕೂರು ಡಿಡಿಪಿಐ ಎಂ.ಆರ್.ಕಾಮಾಕ್ಷಿ ಹೇಳಿದರು.
ಎರಡು ಜಿಲ್ಲೆಗಳ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು ಸೇರಿ ಒಟ್ಟು 723 ಶಾಲೆಗಳ 37,306 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳು ಪಾರದರ್ಶಕವಾಗಿ ನಡೆಯಬೇಕು ಎಂಬ ಕಾರಣಕ್ಕೆ ಪರೀಕ್ಷಾ ದಿನಗಳಂದು ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗಿಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರಿ ಇಲಾಖೆ ವಾಹನಗಳನ್ನು ಕಾಯ್ದಿರಿಸಲಾಗಿದೆ. ಪರೀಕ್ಷೇ ಕೇಂದ್ರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
