ತುಮಕೂರು:
ಹೆಬ್ಬೂರು ಹೋಬಳಿ ಸುತ್ತಮುತ್ತ ಜನರನ್ನು ಘಾಸಿಗೊಳಿಸಿ ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡಿದ್ದ ನರಭಕ್ಷಕ ಚಿರತೆಯನ್ನು ತಕ್ಷಣವೇ ಹಿಡಿಯಲು ಸರ್ಕಾರ ಆದೇಶ ನೀಡಿದೆ. ಮಾನವ ಹತ್ಯೆ ಮಾಡಿರುವ ಚಿರತೆಯನ್ನು ನಿರ್ದಿಷ್ಟವಾಗಿ ಗುರುತಿಸಿದಲ್ಲಿ ಗುಂಡಿಕ್ಕುವ ಬಗ್ಗೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವುದು, ಅಲ್ಲಿಯವರೆಗೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಚಿರತೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳುವುದು, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಕಾಲ ಕಾಲಕ್ಕೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬನ್ನಿಕುಪ್ಪೆ, ಕಣಕುಪ್ಪೆ, ಬೈಚೇನಹಳ್ಳಿ ಸೇರಿದಂತೆ ಗುಬ್ಬಿ ತಾಲ್ಲೂಕಿನ ಸಿ.ಎಸ್‍ಪುರ, ಕುಣಿಗಲ್ ತಾಲ್ಲೂಕಿನಲ್ಲಿ ನಾಲ್ಕು ಮಂದಿ ಸಾವಿಗೆ ಕಾರಣವಾಗಿರುವ ಚಿರತೆಗಳನ್ನು ಸೆರೆಹಿಡಿಯಬೇಕು ಎಂದು ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬೈಚೇನಹಳ್ಳಿ ಬಾಲಕಿ ಚಂದನಾ ಚಿರತೆ ದಾಳಿ ಹಿನ್ನೆಲೆಯಲ್ಲಿ ಸಾವನ್ನಪ್ಪಿದ ವೇಳೆ ಬೈಚೇನಹಳ್ಳಿಗೆ ಆಗಮಿಸಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರನ್ನು ನರಭಕ್ಷಕ ಚಿರತೆಗಳನ್ನು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.
ಚಂದನಾ ಸಾವಿನ ಮಾರನೆಯ ದಿನ ಹೆಬ್ಬೂರು ಬಳಿ ಮತ್ತು ಗ್ರಾಮದಲ್ಲಿ ಸಾರ್ವಜನಿಕರು ಸುತ್ತುವರಿದು ಚಿರತೆ ಹಾವಳಿ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದ ಹಿನ್ನೆಲೆಯಲ್ಲಿ ಸಚಿವರು ಭರವಸೆ ನೀಡಿದ್ದರು. ಅದರಂತೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯಲ್ಲಿ ಚಿರತೆಗೆ ಬಲಿಯಾಗಿರುವ ವಿವರಗಳನ್ನು ಉಲ್ಲೇಖಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾ.1ರಂದು ಸರ್ಕಾರಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಕರ್ನಾಟಕ ಸರ್ಕಾರ ಇವರಿಗೆ ಪತ್ರ ಬರೆದು ಮಾನವ ಹತ್ಯೆ ಮಾಡಿರುವ ಚಿರತೆಯನ್ನು ಸೆರೆ ಹಿಡಿಯುವ ಅಥವಾ ಗುಂಡಿಕ್ಕುವ ಬಗ್ಗೆ ಅಧಿಕೃತ ಅನುಮತಿ ಕೋರಿದ್ದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸುದೀರ್ಘ ವರದಿಯನ್ನು ಪರಿಗಣಿಸಿರುವ ಸರ್ಕಾರವು ನಿಯಮಾನುಸಾರ ಪರಿಶೀಲಿಸಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಕಲಂ 11(1)(ಚಿ) ಅನ್ವಯ ಚಿರತೆಗಳನ್ನು ಗುರುತಿಸಿ ತಕ್ಷಣವೇ ಕ್ರಮ ಕೈಗೊಳ್ಳಲು ಆದೇಶಿಸಿದೆ. ಚಿರತೆಯನ್ನು ಗುಂಡಿಕ್ಕಿ ಕೊಲ್ಲುವ ಆದೇಶ ಸರ್ಕಾರದಿಂದ ಸ್ಪಷ್ಟವಾಗಿ ಹೊರಬಂದಿಲ್ಲ. ಆದರೆ ನರಭಕ್ಷಕ ಚಿರತೆಯನ್ನು ನಿರ್ದಿಷ್ಟವಾಗಿ ಗುರುತಿಸಿದಲ್ಲಿ ನಿಯಮಾನುಸಾರ ಕೇಂದ್ರ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








