ಗುಬ್ಬಿ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರಧ್ವಜವನ್ನು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕಾನೂನು ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಸ್ವಾತಂತ್ರ್ಯ ದಿನದಂದು ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲು ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಟಣದ ಸರ್ಕಲ್ ಇನ್ಸಪೆಕ್ಟರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಸುಮಾರು ಎರಡು ತಾಸು ಚರ್ಚಿಸಿ ಒಮ್ಮತದ ನಿಲುವು ತಾಳಿದರು. ಸುಮಾರು 9 ತಿಂಗಳ ಹಿಂದೆ ನಡೆದ ನಮ್ಮ ರಾಷ್ಟ್ರೀಯ ಬಾವುಟ ವಿರೂಪಗೊಳಿಸಿದ್ದ ಪ್ರಕರಣ ಮಂದಗತಿಯ ತನಿಖೆ ನಡೆದು ಅಧಿಕಾರಿಗಳಿಂದ ಹಾರಿಕೆ ಉತ್ತರ ಬರುತ್ತಿದ್ದ ಹಿನ್ನಲೆಯಲ್ಲಿ ಕೆಲ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ನಿರಂತರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ತನಿಖೆಗೆ ಆಗ್ರಹಿಸಿದ್ದರು.
ಆದರೂ ಸೂಕ್ತ ಉತ್ತರ ಸಿಗದ ಕಾರಣ ಸ್ವಾತಂತ್ರ್ಯ ದಿನದಂದೇ ಸತ್ಯಾಗ್ರಹವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರಪ್ಪ ಅವರ ನೇತೃತ್ವದಲ್ಲಿ ನಡೆಸಲು ಮುಂದಾಗಿದ್ದರು. ಇದನ್ನರಿತ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದು ಶೀಘ್ರದಲ್ಲಿ ಆರೋಪಿ ಬಂದಿಸುವ ಭರವಸೆ ನೀಡಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜನವರಿ 26 ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿದ್ದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೇ ಸಮಾಧಾನದ ಮಾತುಗಳಾಡಿ ತನಿಖೆ ನಡೆಸುವ ಭರವಸೆ ನೀಡಿತ್ತು. ಆದರೆ 9 ತಿಂಗಳಾದರೂ ಯಾವುದೇ ತನಿಖೆ ನಡೆಸದ ಕಾರಣ ಸಂಘಟನೆಗಳು ಸಾಮಾಜಿಕ ಜಾಲತಾಣದ ಮೂಲಕ ಸತ್ಯಾಗ್ರಹಕ್ಕೆ ಕರೆ ನೀಡಿತ್ತು. ಎಚ್ಚೆತ್ತ ಪೊಲೀಸ್ ಇಲಾಖೆ ಶಾಂತಿ ಸಭೆ ಆಯೋಜಿಸಿ ಆಗಸ್ಟ್ ಮಾಹೆಯ ಅಂತ್ಯದಲ್ಲಿ ಉತ್ತಮ ಫಲಿತಾಂಶ ಹೊರಬೀಳಲಿದೆ. ಆರೋಪಿ ಬಂಧನ ಪ್ರಕ್ರಿಯೆ ನಡೆಸುವ ಭರವಸೆ ನೀಡಿದ ಹಿನ್ನಲೆ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈ ಬಿಡಲು ನಿರ್ಧರಿಸಿದರು.
ಸಭೆಯಲ್ಲಿ ಸಿಪಿಐ ಸಿ.ರಾಮಕೃಷ್ಣಯ್ಯ, ಪಿಎಸ್‍ಐ ಜ್ಞಾನಮೂರ್ತಿ, ಸಾಮಾಜಿಕ ಹೋರಾಟಗಾರರಾದ ನಾಗಸಂದ್ರ ವಿಜಯ್‍ಕುಮಾರ್, ಜಿ.ಎಸ್.ಮಂಜುನಾಥ್, ಜಿ.ಆರ್.ರಮೇಶ್, ಬಿ.ಲೋಕೇಶ್, ಅದಲಗೆರೆ ಶ್ರೀನಿವಾಸ್, ಜಯಕರ್ನಾಟಕ ಸಂಘಟನೆಯ ವಿನಯ್, ಮಧು, ಅಖಿಲೇಶ್, ಪ್ರಮೋದ್, ಅರ್ಜುನ್, ಮಾಳೆ ಶಿವು, ಮಹಮದ್ ರಫಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
