ಚಿತ್ರದುರ್ಗ
ಘನ ತ್ಯಾಜ್ಯ ನಿರ್ವಹಣೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಹೊಸದುರ್ಗ ಪುರಸಭೆ ಉತ್ತಮ ಕಾರ್ಯ ಕೈಗೊಂಡಿದ್ದು, ಉಳಿದಂತೆ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ಅನುಷ್ಠಾನ ವಿಷಯವಾಗಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ, ಸ್ಥಳೀಯ ಸಂಸ್ಥೆಗಳು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶಗಳನ್ನು ನೀಡಿದೆ. ನ್ಯಾಯಾಧೀಕರಣದ ಆದೇಶಗಳನ್ನು ಅನುಷ್ಠಾನಗೊಳಿಸುವುದು ಪ್ರತಿಯೊಂದು ನಗರ, ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು
ಮನೆಗಳಿಂದ ಕಸ ಸಂಗ್ರಹಣೆ, ಹಸಿ ಮತ್ತು ಒಣ ಕಸಗಳ ವಿಂಗಡಣೆ, ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ ತಯಾರಿಕೆ, ನಗರವನ್ನು ಸ್ವಚ್ಛವಾಗಿಡುವುದು, ಜನರಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವುದು, ಇ-ತ್ಯಾಜ್ಯ ಹಾಗೂ ಅಪಾಯಕಾರಿ ವಸ್ತುಗಳ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ಪ್ಲಾಸ್ಟಿಕ್ ನಿರ್ಮೂಲನೆ ಕುರಿತಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು
ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ, ನಿರ್ವಹಣೆ ಹಾಗೂ ಪರಿಸರ ರಕ್ಷಣೆ ವಿಷಯದಲ್ಲಿ ಹಲವಾರು ಕೊರತೆಗಳ ನಡುವೆಯೂಹೊಸದುರ್ಗ ಪುರಸಭೆ ಉತ್ತಮ ಕಾರ್ಯ ಮಾಡುತ್ತಿದೆ.ಅಲ್ಲಿನ ಪರಿಸರ ಅಭಿಯಂತರ ತಿಮ್ಮರಾಜು ಅವರ ಉತ್ತಮ ಕಾರ್ಯಗಳಿಂದಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೊಸದುರ್ಗ ಪುರಸಭೆಗೆ ಪ್ರಶಂಸೆ ವ್ಯಕ್ತವಾಗಿದೆ.ಆದರೆ ಜಿಲ್ಲಾ ಕೇಂದ್ರವಾಗಿರುವ ಚಿತ್ರದುರ್ಗ ನಗರಸಭೆಯೂ ಸೇರಿದಂತೆ ಉಳಿದ ನಗರ, ಸ್ಥಳೀಯ ಸಂಸ್ಥೆಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದರು.
ಹಿರಿಯೂರು ಮತ್ತು ಚಳ್ಳಕೆರೆ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಕೈಗೊಂಡ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ನಿರುತ್ತರರಾಗಿ ನಿಂತ ಉಭಯ ನಗರಸಭೆಗಳ ಪರಿಸರ ಅಭಿಯಂತರರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಕೆಲಸ ಮಾಡುವ ಆಸಕ್ತಿ ಇಲ್ಲದಿರುವವರು ಇಲ್ಲಿ ಇರುವುದು ಬೇಡ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ತ್ಯಾಜ್ಯ :
ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಆಸ್ಪತ್ರೆಗಳು, ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿನ ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಉಳಿದ ಎಲ್ಲ ತ್ಯಾಜ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವಿ.ವಿ.ಇನ್‍ಸೈನ್ ಸಂಸ್ಥೆಗೆ ಹೊಣೆ ನೀಡಲಾಗಿದ್ದು, ಸಮರ್ಪಕ ವಿಲೇವಾರಿ ಆಗುತ್ತಿದೆ.
ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿನ ತ್ಯಾಜ್ಯ ವಿಲೇವಾರಿಯನ್ನೂ ಸಹ ಇದೇ ಸಂಸ್ಥೆ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.ಇದರ ಬಗ್ಗೆ ನಿಗಾ ವಹಿಸಲು ಪರಿಸರ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಡಿಯುಡಿಸಿ ಯೋಜನಾ ನಿರ್ದೇಶಕ ರಾಜಶೇಖರ್ ತಿಳಿಸಿದರು.
ಬಳಸಿದ ಮಾಸ್ಕ್ ವಿಲೇವಾರಿ :
ಆರೋಗ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಸರ್ಕಾರ ನೀಡಿರುವ ಮಾರ್ಗಸೂಚಿಯನ್ವಯ ಸಾರ್ವಜನಿಕರು, ತಾವು ಬಳಸಿದ ಮಾಸ್ಕ್ ಗಳನ್ನು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವುದು ಸರಿಯಲ್ಲ.ಕೋವಿಡ್ ವೈರಸ್ ಮಾಸ್ಕ್‍ಗಳ ಮೇಲ್ಮೈನಲ್ಲಿ ಗರಿಷ್ಟ 72 ಗಂಟೆಗಳ ಕಾಲ ಜೀವಂತವಾಗಿರಬಲ್ಲದು.ಹೀಗಾಗಿ ಬಳಸಿದ ಮಾಸ್ಕ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಮನೆಯಲ್ಲಿಯೇ 72 ಗಂಟೆಗಳ ಕಾಲ ಸುರಕ್ಷಿತವಾಗಿರಿಸಿ, ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.72 ಗಂಟೆಗಳ ಬಳಿಕ ಕಸ ಸಂಗ್ರಹಿಸುವ ವಾಹನಗಳಿಗೆ ತ್ಯಾಜ್ಯಗಳೊಂದಿಗೆ ಹಾಕಬಹುದಾಗಿದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಎಲ್ಲ ನಗರ, ಸ್ಥಳೀಯ ಸಂಸ್ಥೆಗಳು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರು ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ. ನಂದಗಾವಿ, ಡಿಯುಡಿಸಿ ಕಾರ್ಯಪಾಲಕ ಅಭಿಯಂತರ ಕಾಳಪ್ಪ, ಸಹಾಯಕ ಇಂಜಿನಿಯರ್ ಕೆ.ಎನ್. ಸ್ವಾಮಿ, ಪರಿಸರ ಅಧಿಕಾರಿ ಪ್ರಕಾಶ್ ಸೇರಿದಂತೆ ನಗರಸಭೆ, ಪುರಸಭೆಗಳ ಪರಿಸರ ಇಂಜಿನಿಯರ್‍ಗಳು, ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ