ಲಾಕ್‍ಡೌನ್ ವೇಳೆಯ ವೇತನಕ್ಕಾಗಿ ಆಗ್ರಹ

ದಾವಣಗೆರೆ

     ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಮಾಡಲಾಗಿದ್ದ ಲಾಕ್‍ಡೌನ್‍ನಿಂದಲೂ (ಕಳೆದ ನಾಲ್ಕು ತಿಂಗಳಿಂದ) ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಮಧ್ಯಾಹ್ನದ ಬಿಸಿಯೂಟ ತಯಾರಕರು ಕೊರೊನಾದ ಹಿನ್ನೆಲೆಯಲ್ಲಿ ಮುಖ ಗವಸು ಧರಿಸಿಕೊಂಡು, ಅಂತರ ಕಾಪಾಡಿಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ಬಿಸಿಯೂಟ ತಯಾರಕರಿಗೆ ಏಪ್ರಿಲ್, ಮೇ ತಿಂಗಳ ಲಾಕ್ ಡೌನ್ ವೇತನ, ಜೂನ್, ಜುಲೈನ ವೇತನ ಸೇರಿದಂತೆ 4 ತಿಂಗಳ ವೇತನ ನೀಡಿಲ್ಲ. ಹೀಗಾಗಿ ಈ ವೃತ್ತಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಿಸಿಯೂಟ ತಯಾರಕರು ಬದುಕೇ ದುಸ್ತರವಾಗಿದೆ ಎಂದು ಆರೋಪಿಸಿದರು.

    ಕಳೆದ 17 ವರ್ಷಗಳಿಂದ ರಾಜ್ಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯದಲ್ಲಿ ಸುಮಾರು 1.18 ಲಕ್ಷದಷ್ಟು ಬಿಸಿಯೂಟ ತಯಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕನಿಷ್ಟ ವೇತನ ಕಾಯ್ದೆಗೆ ಒಳಪಡದೇ ಗೌರವ ಸಂಭಾವನೆಯಲ್ಲಿ ಮುಖ್ಯ ಅಡುಗೆಯವರು 2700 ರು.ಗೆ, ಸಹಾಯಕ ಅಡುಗೆಯವರು 2600 ರು.ಗೆ ದುಡಿಯುತ್ತಿದ್ದಾರೆ.

   ಇಷ್ಟು ಕಡಿಮೆ ಗೌರವಧನದಲ್ಲಿ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಬಿಸಿಯೂಟ ಸಿಬ್ಬಂದಿ ಸೇವೆ ಕಾಯಂಗೊಳಿಸಬೇಕು. ಕನಿಷ್ಟ ವೇತನ ನೀಡಬೇಕು. ಇಎಸ್‍ಐ, ಪಿಎಫ್, ನಿವೃತ್ತಿ ವೇತನ, ಇಡುಗಂಟು ಹಣ, ಅಪಘಾತ ಪರಿಹಾರ, ಮರಣ ಪರಿಹಾರ ನಿಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

   ಪರಿಹಾರವೂ ಇಲ್ಲದೇ, ವೇತನವೂ ಸಿಗದೇ ಬಿಸಿಯೂಟ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿರುವ ಇಂತಹ ಮಹಿಳೆಯರಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು. ಬಿಸಿಯೂಟ ತಯಾರಕರಿಗೆ ಏಪ್ರಿಲ್‍ನಿಂದ ಲಾಕ್ ಡೌನ್‍ನ ಪರಿಹಾರ, ಜೂನ್-ಜುಲೈನ 4 ತಿಂಗಳ ವೇತನ ನೀಡಿ, ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸರ್ಕಾರ ಬಿಸಿಯೂಟ ತಯಾರಕರ ಬೇಡಿಕೆಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

   ಪ್ರತಿಭಟನೆಯ ನೇತೃತ್ವವನ್ನು ಸಂಘಟನೆ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ಬೆಳಲಗೆರೆ ರುದ್ರಮ್ಮ, ಮಹಮ್ಮದ್ ಬಾಷಾ, ಜ್ಯೋತಿಲಕ್ಷ್ಮಿ, ಮಳಲ್ಕೆರೆ ಜಯಮ್ಮ, ಹರಿಹರ ಪ್ರಮೀಳಾ, ಹೊನ್ನಾಳಿ ಲಲಿತಮ್ಮ, ನ್ಯಾಮತಿ ಜಯಮ್ಮ, ಚನ್ನಗಿರಿ ಮಂಗಳಗೌರಿ, ಜಗಳೂರು ಚನ್ನಮ್ಮ, ಸರೋಜಾ, ಸಿ.ರಮೇಶ, ಮಂಜುಳಾ, ಗದಿಗೇಶ ಪಾಳೇದ, ವನಜಾಕ್ಷಿ, ಅರುಣ, ರಾಧಮ್ಮ, ಪದ್ಮಾ ಮತ್ತಿತರರು ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link