ರಾಯಚೂರು
ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ಕುರಿತು ಆಯೋಗ ಯಾವ ತೀರ್ಮಾನ ಕೈಗೊಂಡರು ಅದಕ್ಕೆ ಸರ್ಕಾರ ಬದ್ದವಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಈಶಾನ್ಯ ಪದವಿದರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ ಸೋಂಕು ಹೆಚ್ಚುತ್ತಿದೆ ಎನ್ನುವ ಆತಂಕ ಗ್ರಾಮೀಣ ಭಾಗದಲ್ಲಿದೆ. ಆಯೋಗದ ಮುಂದೆಯೂ ಅಭಿಪ್ರಾಯ ಇದೆ. ಹೀಗಾಗಿ, ಸರ್ಕಾರ ಚುನಾವಣೆ ನಡೆಸುವ ನಿರ್ಧಾರ ಕೈಗೊಂಡರು ಬದ್ದ ಎಂದು ಸ್ಪಷ್ಟಪಡಿಸಿದರು. ಶಿಕ್ಷಕರ ಕ್ಷೇತ್ರದಂತೆ ಸೀಮಿತವಾದ ಚುನಾವಣೆಯಂತಲ್ಲ. ಗ್ರಾ.ಪಂ ಚುನಾವಣೆಯಾದರೆ ಪ್ರಚಾರ ಅಬ್ಬರ ಹೆಚ್ಚಿ, ಸಾಮಾಜಿಕ ಅಂತರವಿಲ್ಲದೆ ಸೋಂಕು ಹಬ್ಬುವ ಆತಂಕ ಇದೆ. ಆಲೋಚಿಸಿ ಆಯೋಗ ಸೂಕ್ತ ನಿರ್ಧಾರ ಮಾಡಲಿದೆ ಎಂದು ಹೇಳಿದರು.
ಕಾಂಗ್ರೆಸ್‌ನವರ ಅವಧಿಯಲ್ಲಿ ಬಿಜೆಪಿಯವರ ಮೇಲೆ ಇದೇ ತನಿಖಾ ಸಂಸ್ಥೆಗಳು ದಾಳಿ ಮಾಡಿ ಬಂದಿಸಿದಾಗ ಅಧಿಕಾರ ದುರುಪಯೋಗವಾಗಿಲ್ಲ. ಈಗ ದಾಳಿ ಆದರೆ ದುರ್ಬಳಕೇನಾ ಎಂದು ಪ್ರಶ್ನಿಸಿದರು. ಈ ಹಿಂದೆಯೂ ಡಿಕೆಶಿ ಅವರ ಮನೆಯಲ್ಲಿ ಹಣ ಸಿಕ್ಕಿತ್ತಲ್ಲ, ಕೇಸ್ ಆಗಿತ್ತು, ಜೈಲಿಗೂ ಹೋಗಿದ್ದಾರಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿದೆ. ಇಲ್ಲದಿದ್ದರೆ ನಿರಪರಾಧಿಯಾಗಿ ಹೊರ ಬರಲಿದ್ದಾರೆ ದುರ್ಬಳಕೆ ಪ್ರಶ್ನೆ ಬಾರದು ಎಂದರು.
ರಾಜ್ಯದ 8 ಜಿಲ್ಲೆಗಳಲ್ಲಿ 2 ಸಾವಿರ ಅಡಿ ಆಳವಾಗಿ ಬೋರ್ ಕೊರೆದರೂ ನೀರು ಸಿಗುತ್ತಿಲ್ಲ, ಯುರೋನಿಯಂ ಅಂಶ ಇದ್ದರೂ ಇರಬಹುದು. ಹೀಗಾಗಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರಕೃತಿಯಿಂದಾದ ಸಮಸ್ಯೆಗೆ ಪರಿಹಾರ ಹುಡುಕುವುದು ಸವಾಲು.
6200 ಗ್ರಾ.ಪಂ.ಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಪೈಕಿ 1500ಕಡೆ ಯಶಸ್ವಿಯಾಗಿದೆ. ಜನ ಜಾಗೃತಿ ಮೂಡಿಸಲಾಗುತ್ತಿದೆ.
ಕುರುಬ ಸಮುದಾಯ ಎಸ್‌ಟಿಗೆ ಸೇರಿಸುವುದರಿಂದ ಆ ಸಮುದಾಯಕ್ಕೆ ಅನ್ಯಾಯವಾಗದು. ತಾವು ಕೇಂದ್ರ, ಸಮುದಾಯ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಮನ್ವಯಕಾರನಾಗಿ ಮಾತ್ರ ಕೆಲಸ ಮಾಡುವೆ. ಕುರುಬ ಸಮುದಾಯದ ಸ್ವಾಮೀಜಿಗಳು ನೇತೃತ್ವ ವಹಿಸಿದ್ದು, ತಾವು ವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಆ.11ರ ಸಭೆಗೆ ಸಿದ್ದರಾಮಯ್ಯ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ತಾವು ಭಾಗವಹಿಸುವುದಾಗಿ ಹೇಳಿದರು.
ಸದ್ಯ ಶಾಲೆ, ಕಾಲೇಜು ಆರಂಭಿಸುವ ಆಲೋಚನೆ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಶಿಕ್ಷಣ ಸಚಿವರೇ ಹೇಳಿದ್ದಾರೆ. ಜನಪ್ರತಿನಿಧಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಮಾಡಲಿದ್ದಾರೆ. ಮಾಸ್‌ಕ್ ದಂಡ ಹೆಚ್ಚಳ ಅರಿವು ಮೂಡಿಸುವುದಿತ್ತು ವಿನಃ ಬೇರೇನೂ ಅಲ್ಲ. ಇಳಿಸಿರುವುದು ಸ್ವಾಗತಾರ್ಹ. ಜನ ಸ್ವಯಂ ಪ್ರೇರಣೆಯಿಂದ ಮಾಸ್‌ಕ್ ಹಾಕಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಈಶಾನ್ಯ ಕ್ಷೇತ್ರದ ಅಭ್ಯರ್ಥಿ ಶಶಿಲ್ ನಮೋಶಿ, ಮುಖಂಡರಾದ ಸುನಿಲ್ ವಲ್ಯಾಪುರೆ, ಎನ್.ಶಂಕ್ರಪ್ಪ, ತ್ರಿವಿಕ್ರಮ ಜೋಶಿ, ರಾಮಚಂದ್ರ ಕಡುಗೋಲು ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ