ಬೆಂಗಳೂರು
ಕೊರೋನ ಆರ್ಭಟ ಹಿನ್ನೆಲೆಯಲ್ಲಿ ವಿಧಾನ ಸಭೆ ಕಲಾಪವನ್ನು ಮೂರು ದಿನಕ್ಕೆ ಮೊಟಕು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ, ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳ ಮುಖಿಯರು ಸಂಘಟನೆಯ ಅಧ್ಯಕ್ಷರು ಹಾಗೂ ಇತರರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಗಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಬರ, ನೆರೆ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ. ಇದೆಲ್ಲವನ್ನು ಅಧಿವೇಶನದಲ್ಲಿ ಸಮಗ್ರ ಚರ್ಚೆ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಅಧಿವೇಶನ ಮೊಟಕುಗೊಳಿಸಲು ಸೂಚನೆ ಕೊಟ್ಟಿದ್ದಾರಂತೆ. ಸರ್ಕಾರದಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರಕ್ಕೆ ನಮ್ಮ ಹಾಗೂ ಪಕ್ಷದ ಸಹಕಾರ ಇಲ್ಲ. ಯಾವುದೇ ಕಾರಣಕ್ಕೂ ಸದನವನ್ನು ಮೊಟಕುಗೊಳಿಸಲು ನಾವು ಬಿಡಲ್ಲ ಎಂದು ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಒಂದಷ್ಟು ದಿನ ಸದನ ಮುಂದುವರೆಸಿ ಎಂದು ಕೇಳುತ್ತೇವೆ. ಸದನ ನಡೆಸಿದರೆ ಇವರ ಭ್ರಷ್ಟಾಚಾರ ಹೊರಗೆ ಬರುತ್ತೆ. ಇವರು ಸಿಕ್ಕಿಹಾಕಿಕೊಂಡಿದ್ದಾರೆ. ಹೀಗಾಗಿ ಸದನ ನಡೆಸುವುದು ಬೇಡ ಅಂತ ಚಿಂತನೆಯಲ್ಲಿ ಇದ್ದಾರೆ. ನಮಗೆ ದೂರವಾಣಿ ಕರೆ ಮಾಡಿದ್ದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರನ್ನ ರಕ್ಷಣೆ ಮಾಡುವುದು ಇವರ ಕೆಲಸ. ಇವರಿಂದಲೇ ಕರೋನ ಬಂದಿದ್ದು. ಪ್ರಪಂಚದಲ್ಲಿ ಚರಿತ್ರೆ ಸೃಷ್ಟಿ ಮಾಡುತ್ತೇವೆ ಅಂತ ಹೇಳಿದವರು, ಒಂದು ವಾರಕ್ಕೆ ಕೋವಿಡ್ ಕೇರ್ ಸೆಂಟರ್ ರೂಂ ಕ್ಲೋಸ್ ಮಾಡಿದ್ದಾರೆ. ಭ್ರಷ್ಟಾಚಾರ ನಡೆದಿರುವ ಬಗ್ಗೆ ಬ್ಲಾಕ್ ಆ್ಯಂಡ್ ವೈಟ್ ಪ್ರೂಫ್ ಇದೆ. ಇದೆಲ್ಲವೂ ನಾವು ಸದನದಲ್ಲಿ ಚರ್ಚೆ ಮಾಡಬೇಕಿದೆ ಎಂದು ಹೇಳಿದರು.
ಮಂಗಳ ಮುಖಿಯರನ್ನು ಪಕ್ಷಕ್ಕೆ ಈ ಹಿಂದೆಯೇ ಸೇರ್ಪಡೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಹಲವಾರು ಕಾರಣಗಳಿಂದ ಆಗಿರಲಿಲ್ಲ. ಇಂದು ಶುಭಗಳಿಗೆ, ಶುಭ ಮುಹೂರ್ತ ಅಕ್ಕಯ್ಯ ಪದ್ಮಶಾಲಿ ಅವರು ಪಕ್ಷ ಸೇರಿದ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮಹಿಳೆಯರು ಗಂಡಸಿನ ಸರಿ ಸಮಾನವಾಗಿ ಹೋ ರಾಟ ಮಾಡಬೇಕು.ಆ ಎಲ್ಲಾ ಸಾಮರ್ಥ್ಯ ಮಹಿಳೆಯರಿಗೆ ಇದೆ. ಅಕೈ ಪದ್ಮಶಾಲಿ ರಾಜ್ಯ ಕಾಂಗ್ರೆಸ್‍ನ ಆಸ್ತಿ ಅಲ್ಲ, ದೇಶದ ಆಸ್ತಿ. ಗ್ರೌಂಡ್‍ನಲ್ಲಿ ಯಾರು ಕೆಲಸ ಮಾಡುತ್ತಾರೆ ಅಂತವರು ಪಕ್ಷಕ್ಕೆ ಬೇಕು. ನನ್ನ ಸುತ್ತ ಗಿರಕಿ ಹೊಡೆಯುವವರು ಇದ್ದಾರೆ. ಅಂಥವರು ನಾಯಕರಾಗಲು ಸಾಧ್ಯ ಇಲ್ಲ. ಅಕ್ಕಯ್ಯ ಅವರನ್ನು ನಾವು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಬಳಸಿಕೊಳ್ಳುತ್ತೇವೆ. ಅಕ್ಕಯ್ಯ ಅವರ ಆಗಮನ ಪಕ್ಷಕ್ಕೆ ಪಾಸಿಟಿವ್ ಶೈನ್ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಕೈ ಪದ್ಮಶಾಲಿ, ನಾನು ಲಿಂಗ ಪರಿವರ್ತನೆ ಗೊಂಡು ಇಲ್ಲಿ ಕೂತಿಲ್ಲ. ಇಂದಿರಾಗಾಂಧಿ ಅವರ ಕಾಲದಿಂದಲೂ ನಮ್ಮ ಸಮುದಾಯಕ್ಕೆ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಯಾರೇ ಕೇಳಿದ್ರು ಅವರು ಹೇಳಿದ್ದು ಕಾಂಗ್ರೆಸ್ ಪಕ್ಷ ಸೇರಿ ಎಂದು, ನಮಗೆ ಸಾಮಾಜಿಕ ನ್ಯಾಯ ಸಿಕ್ಕಿದ್ರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ತಿಳಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ