ತುಮಕೂರು
ಸೇವಾದಳ ಯಂಗ್ ಬ್ರಿಗೇಡ್ ಮೂಲಕ ಯುವಕರನ್ನು ಸಂಘಟಿಸಿ ದೇಶ ಸೇವೆಗೆ ಅಣಿಗೊಳಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಮಾಜಿ ಶಾಸಕ ಡಾ.ಎಸ್. ರಫೀಕ್ ಅಹಮ್ಮದ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸೇವಾದಳ ಯಂಗ್ ಬ್ರಿಗೇಡ್ ತುಮಕೂರು ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಅಹಿಂಸಾತ್ಮಕ ಚಳವಳಿ ಮೂಲಕ ಪ್ರಾರಂಭಗೊಂಡ ಸೇವಾದಳ ತನ್ನ ಸೇವಾ ಮನೋಭಾವ ರೂಢಿಸಿಕೊಳ್ಳುವಂತೆ ಮಾಡುವುದು ಈ ಸೇವಾ ದಳದ ಮುಖ್ಯ ಉದ್ದೇಶವಾಗಬೇಕು ಎಂದರು.
ಚುನಾವಣಾ ಪೂರ್ವದಲ್ಲಿ ಬರೀ ಸುಳ್ಳು ಆಶ್ವಾಸನೆಗಳ ಮೂಲಕವೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 6 ವರ್ಷಗಳ ಕಾಲ ಆಡಳಿತದಲ್ಲಿ ಮಾಡಿರುವ ಸಾಧನೆ ಶೂನ್ಯ. ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವುದೇ ಚುನಾವಣಾ ಭರವಸೆಯನ್ನು ಈಡೇರಿಸಿಲ್ಲ. ರಾಷ್ಟ್ರದ ನಿರುದ್ಯೋಗಿ ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ನೀಡುವ ಭರವಸೆ ನೀಡಿ ಇದುವರೆಗೂ 12 ಕೋಟಿ ಯುವಕರಿಗೆ ಉದ್ಯೋಗ ನೀಡಬೇಕಿತ್ತು. ಆದರೆ ಕೊರೋನ ಮಹಾಮಾರಿಯಿಂದ ಕಳೆದ ಐದಾರು ತಿಂಗಳಿನಿಂದ ಸುಮಾರು 13 ಕೋಟಿಗೂ ಹೆಚ್ಚು ಜನ ದೇಶದಲ್ಲಿ ಉದ್ಯೋಗ ಕಳೆದುಕೊಂಡಿದ್ದು, ಕನಿಷ್ಠ ಅವರಿಗೆ ಉದ್ಯೋಗದ ಭದ್ರತೆ ಕಲ್ಪಿಸುವಲ್ಲಿ ಪ್ರಧಾನಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪೂರ್ವ ತಯಾರಿಯಿಲ್ಲದೆ ದೇಶದಲ್ಲಿ ಲಾಕ್‍ಡೌನ್ ಮಾಡಿ ಅಸಂಖ್ಯಾತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಶ್ರಮಿಕ ವರ್ಗದವರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‍ನಲ್ಲಿ ಯಾರಿಗೆ ತಲುಪಿದೆ ಎಂಬುದೇ ಇದುವರೆಗೂ ತಿಳಿದಿಲ್ಲ ಎಂದರು.
ಸೇವಾದಳದ ರಾಷ್ಟ್ರೀಯ ಸಂಚಾಲಕ ಕಿರಣ್ ಮೋರಸ್ ಮಾತನಾಡಿ, ಜನರಲ್ಲಿ ಸೇವಾ ಮನೋಭಾವನೆಯೊಂದಿಗೆ ರಾಷ್ಟ್ರೀಯತೆಯ ಮನೋಭಾವವೂ ಕಡಿಮೆಯಾಗುತ್ತಿದೆ. ಮಹಾತ್ಮ ಗಾಂಧೀಜಿಯ 18 ಅಂಶಗಳ ಕಾರ್ಯಕ್ರಮಗಳನ್ನು ಮೊದಲು ಅಳವಡಿಸಿಕೊಂಡು ಸೇವಾದಳ ಘಟಕವು ಯುವಕರಲ್ಲಿ ಸಂಯಮ, ಧೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಹಾಗೂ ಪೂರ್ಣ ಸೇವಾ ಮನೋಭಾವವನ್ನು ಮೂಡಿಸುವ ಮೂಲಕ ಅವರಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸಬೇಕು ಎಂದು ಹೇಳಿದರು.
ಸೇವಾದಳ ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ. ಮಾತನಾಡಿ, ಸೇವಾ ಮನೋಭಾವದಿಂದ ಎಲ್ಲರೂ ಕೆಲಸ ಮಾಡಲು ಮುಂದಾಗಬೇಕು. ಸೇವಾದಳವು ನಿಸ್ವಾರ್ಥ ಸೇವಾ ಸಂಘಟನೆಯಾಗಿದ್ದು, ಯುವಕರಲ್ಲಿ ಸೇವಾ ಮನೋಭಾವ ಬೆಳೆಸಲು ಇಂತಹ ಸಂಘಟನೆಯಿಂದ ಅನುಕೂಲವಾಗಲಿದೆ ಎಂದರು.
ನಿಖಿತ್ ರಾಜ್ ಮೌರ್ಯ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಅಹಿಂಸಾತ್ಮಕ ಚಳವಳಿ ಮೂಲಕ ಪ್ರಾರಂಭಗೊಂಡ ಸೇವಾದಳ ತನ್ನ ಸೇವಾ ಮನೋಭಾವ ರೂಢಿಸಿಕೊಳ್ಳುವಂತೆ ಮಾಡುವುದು ಈ ಸೇವಾ ದಳದ ಮುಖ್ಯ ಉದ್ದೇಶವಾಗಬೇಕು. ಜಾತೀಯತೆಯ ಭಾವನೆ ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯತೆಯನ್ನು ಮೂಡಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮಾತನಾಡಿ, ಬರೀ ಸಭೆ ಸಮಾರಂಭಗಳಿಂದ ಯುವಕರನ್ನು ಸಂಘಟಿಸಲು ಸಾಧ್ಯವಿಲ್ಲ, ಮೊದಲು ಯುವ ಕಾಂಗ್ರೆಸ್‍ನಿಂದ ಮತ್ತು ಸೇವಾದಳ ಯಂಗ್ ಬ್ರಿಗೇಡ್‍ನಿಂದ ಯುವಕರಿಗೆ ತರಬೇತಿ ನೀಡಿ, ತರಬೇತಿ ಪಡೆದ ಯುವಕರು ಪ್ರತಿ ಮನೆ ಮನೆಗೂ ತೆರಳಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸೇವಾದಳ ಯಂಗ್‍ಬ್ರಿಗೇಡ್ ಜಿಲ್ಲಾಧ್ಯಕ್ಷ ಮಧು, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈನ್ ಶೇಖ್ ಫಯಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
