ಕೊರಟಗೆರೆ
ಜನತಾ ನ್ಯಾಯಾಲಯ ನೀಡಿರುವ ತೀರ್ಪಿನಂತೆ ಮಾ.25 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ತುಮಕೂರು ಟೌನ್‍ಹಾಲ್ ನಿಂದ ಮೆರವಣಿಗೆ ಮೂಲಕ ಜಿಲ್ಲಾದಿಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಹೈಕಮಾಂಡ್ ತನ್ನ ನಿರ್ಧಾರ ಬದಲಿಸುವ ನಿರೀಕ್ಷೆಯೊಂದಿಗೆ ಕೊನೆಯ ಕ್ಷಣದವರೆಗೂ ಕಾದು ಜನತಾ ನ್ಯಾಯಾಲಯದ ತೀರ್ಪಿಗೆ ಬದ್ದನಾಗಿರುತ್ತೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಸಂಸದ ಎಸ್.ಪಿ.ಮುದ್ದಹನುಮೆಗೌಡ ತಿಳಿಸಿದರು.
ಅವರು ಡಿಸಿಎಂ ಸ್ವಂತ ಕ್ಷೇತ್ರವಾದ ಕೊರಟಗೆರೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯನವರ ಮನೆಯಲ್ಲಿ ಏರ್ಪಡಿಸಿದ್ದ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ಹಿತೈಷಿಗಳ ಸಭೆಯಲ್ಲಿ ಕಾಂಗ್ರೆಸ್ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕಾರ್ಯಕರ್ತರ ಒಕ್ಕ್ಕೊರಳಿನ ಅಭಿಪ್ರಾಯದ ನಂತರ ಮಾತನಾಡಿದರು.
ಜೆಡಿಎಸ್ ಕಾಂಗ್ರೆಸ್ ಮೈತ್ರಿ ಧರ್ಮ ಪಾಲನೆ ಆಟದಲ್ಲಿ ರಾಜ್ಯದ 10 ಮಂದಿಯಲ್ಲಿ 9 ಮಂದಿ ಹಾಲಿ ಸಂಸದರಿಗೆ ಟಿಕೆಟ್ ನೀಡಿ, ನಿಷ್ಠಾವಂತ ಸದಸ್ಯನಾದ ನನಗೆ ಟಿಕೆಟ್ ನೀಡದೆ ವಂಚಿಸಿದ್ದಾರೆ. ನನಗೆ ಯಾವ ಕಾರಣಕ್ಕೆ ಟಿಕೆಟ್ ತಪ್ಪಿದೆ? ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನನ್ನನ್ನು ಒಂದು ಅಭಿಪ್ರಾಯ ಕೇಳದೆ ನನಗೆ ಟಿಕೆಟ್ ತಪ್ಪಿಸಿರುವುದು ಯಾವ ನ್ಯಾಯ? ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ ನಿಜ, ಆದರೆ ಮೈತ್ರಿ ಪಾಲನೆ ವಿಚಾರವನ್ನು ನನ್ನ ಬಳಿಯೂ ಚರ್ಚಿಸಬೇಕಿತ್ತು.
ಯಾವ ಕಾರಣದಿಂದ ನನಗೆ ಟಿಕೆಟ್ ಕೊಡಿಸಲು ನಿರಾಕರಿಸಿದ್ದಾರೆ ಎಂದು ಹೇಳಲಿ. ನಾನು ಕಳೆದ 5 ವರ್ಷಗಳಲ್ಲಿ ನನ್ನ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿ, ಮತದಾರರ ವಿಶ್ವಾಸ ಗಳಿಸಿದ್ದೇನೆ. ನನ್ನಿಂದ ಯಾವ ಲೋಪವಾಗಿದೆ ಎಂದು ಟಿಕೆಟ್ ನಿರಾಕರಿಸಿದ್ದಾರೆ ಎಂದು ರಾಜ್ಯ ನಾಯಕರನ್ನು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ರಾಷ್ಟ್ರನಾಯಕರು. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಆದರೆ ನಾನು ಅಂತಹ ನಾಯಕನಲ್ಲ. ನಾನು ತುಮಕೂರು ಜಿಲ್ಲೆಗೆ ಸೀಮಿತವಾಗಿದ್ದು, ಉತ್ತಮ ತೀರ್ಮಾನ ಕೈಗೊಳ್ಳಲು ಇನ್ನು ಎರಡು ದಿನಗಳು ಕಾಲಾವಕಾಶವಿದೆ. ಹೈಕಮಾಂಡ್ ಉತ್ತಮ ತೀರ್ಮಾನ ಕೈಗೊಂಡು, ನನಗೆ ಮೈತ್ರಿ ಧರ್ಮದಂತೆ ಟಿಕೆಟ್ ನೀಡಬೇಕು. ತಪ್ಪಿದರೆ ಜನತಾ ತೀರ್ಮಾನಕ್ಕೆ ಬದ್ದನಾಗಿ ಸ್ಪರ್ಧಿಸಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಪಪಂ ಅಧ್ಯಕ್ಷ, ಹಾಲಿ ಸದಸ್ಯ ಎ.ಡಿ ಬಲರಾಮಯ್ಯ ಮಾತನಾಡಿ, 2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಅಲೆ ಇದ್ದರೂ ಸಹ ಮುದ್ದಹನುಮೆಗೌಡರು 78ಸಾವಿರ ಮತಗಳ ಅಂತರದಿಂದ ವಿಜಯಿಯಾಗಿದ್ದರು. ಜಿಲ್ಲೆ ಸೇರಿದಂತೆ ದೇಶದಲ್ಲೇ ಉತ್ತಮ ಸಂಸದ ಎಂದು ಹೆಸರು ಪಡೆದಿರುವ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು. ದೇವೆಗೌಡರು ರಾಜ್ಯದ ಇತರ ಕ್ಷೇತ್ರದಿಂದ ಸ್ಪರ್ಧಿಸಿ ಈ ಕ್ಷೇತ್ರವನ್ನು ಮುದ್ದಹನುಮೆಗೌಡರಿಗೆ, ಕಾಂಗ್ರೆಸ್ ಪಕ್ಷಕ್ಕೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಆಗ್ರಹಿಸಿದರು. ಹಿಂದಿನ ಇತಿಹಾಸದಲ್ಲಿ ಜೆಡಿಎಸ್ ಒಂದೇ ಬಾರಿ ಗೆಲುವು ಸಾಧಿಸಿರುವುದು, ಕಾಂಗ್ರೆಸ್ ಪಕ್ಷವೇ ಹೆಚ್ಚು ಬಾರಿ ಜಯಗಳಿಸಿರುವುದನ್ನು ನೆನೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಕೆ.ಆರ್.ಓಬಳರಾಜು, ಎನ್.ಕೆ.ನರಸಿಂಹಪ್ಪ, ನಾಗರಾಜು, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಸದಸ್ಯರಾದ ವೆಂಕಟಪ್ಪ, ಈರಣ್ಣ, ಮಾಜಿ ಸದಸ್ಯರಾದ ರವಿಕುಮಾರ್, ಸುರೇಶ್, ನಾಗಭೂಷಣ್, ಮೈಲಾರಪ್ಪ, ರಾಮಚಂದ್ರಯ್ಯ, ಮಯೂರ ಗೋವಿಂದರಾಜು, ಮಹಿಳಾ ಕಾಂಗ್ರ್ರೆಸ್ ಅಧ್ಯಕ್ಷೆ ಜಯಮ್ಮ, ಕವಿತಾ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ತುಮಲ್ ಸದಸ್ಯ ಅಬ್ದುಲ್ ರಜಾಕ್, ಮುಖಂಡರಾದ ರಂಗನಾಥ್, ರಿಯಾಸತ್ ಅಲಿ, ಮಲ್ಲಿಕಾರ್ಜನ್, ಜಯರಾಮು, ರುದ್ರಪ್ರಸಾದ್, ರಾಮಸ್ವಾಮಿ, ರಂಗರಾಜು, ನರಸಪ್ಪ ಸೇರಿದಂತೆ 300ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ