ರಾಕ್ಷಸಿ ಸ್ವಭಾವದಿಂದ ಅಧರ್ಮದ ತಾಂಡವ ನೃತ್ಯ

ದಾವಣಗೆರೆ:

          ಮನುಷ್ಯನಲ್ಲಿ ರಾಕ್ಷಸಿ ಸ್ವಭಾವ ಹೆಚ್ಚಾಗಿರುವರಿಂದ ಹಾಗೂ ನಾವು ರಾಜಕೀಯ ದಾಸ್ಯಕ್ಕೆ ಒಳಗಾಗಿರುವ ಕಾರಣ ಪ್ರಸ್ತುತ ಸಮಾಜದಲ್ಲಿ ಅಧರ್ಮವೇ ತಾಂಡವವಾಡುತ್ತಿದೆ ಎಂದು ಶ್ರೀಆಂಜನಾದ್ರಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಎ.ತಿಮ್ಮಾರೆಡ್ಡಿ ಕಳವಳ ವ್ಯಕ್ತಪಡಿಸಿದರು.

          ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃತ ಯುಗದಲ್ಲಿ ಎಲ್ಲರೂ ಸತ್ಯವಂತರೇ ಇದ್ದರು. ಆದರೆ, ತ್ರೇತಾ ಯುಗದಲ್ಲಿ ಸತ್ಯವಂತರ ಸಂಖ್ಯೆ ಅರ್ಧದಷ್ಟು ಕಡಿಮೆ ಆಯಿತು. ಹಾಗೆಯೇ ದ್ವಾಪಾರ ಯುಗದಲ್ಲೂ ಅರ್ಧದಷ್ಟು ಸತ್ಯವಂತರ ಸಂಖ್ಯೆ ಕ್ಷೀಣಿಸಿತು. ಹೀಗಾಗಿ ಈಗಿನ ಕಲಿಯುಗದಲ್ಲಿ ಸತ್ಯವಂತರಿಲ್ಲದೇ, ಅರ್ಧಮ ತಾಂಡವ ನೃತ್ಯವಾಡುತ್ತಿದೆ ಎಂದು ಹೇಳಿದರು.

          ಎಲ್ಲಾ ಧರ್ಮಗಳ ತಿರಳು ಒಂದೇಯಾಗಿದೆ. ಆದರೆ, ಧರ್ಮವನ್ನು ಪ್ರಸ್ತುತ ರಾಜಕೀಯ ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿರುವುದರ ಪರಿಣಾಮ, ಸಮಾಜದಲ್ಲಿ ಧರ್ಮಕ್ಕೆ ಜಾಗ ಇಲ್ಲವಾಗಿ ಕೊಲೆ, ಸುಲಿಗೆ ನಡೆಯುತ್ತಿದೆ. ಕವಡೆ ಕಾಸಿಗಾಗಿ ಅಣ್ಣ-ತಮ್ಮಂದಿರ ಮಧ್ಯೆಯೇ ಜಗಳ, ಸಂಘರ್ಷ ನಡೆಯುತ್ತಿದೆ. ಅಲ್ಲದೆ, ಹೆತ್ತು ಹೊತ್ತು ಸಾಕಿ, ಸಲುಹಿದ ತಂದೆ-ತಾಯಿಯನ್ನು ಅನಾಥಾಶ್ರಮಕ್ಕೆ ದೂಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

           ದಾವಣಗೆರೆಯನ್ನು ದಾನಿಗಳ ನಗರ ಎಂಬುದಾಗಿ ಕರೆದರೆ ಅತಿಶಯೋಕ್ತಿಯಾಗದು. ಇಲ್ಲಿನ ಪ್ರತಿ ರಸ್ತೆಗಳಿಗೆ ಕೆಲ ಮನೆತನಗಳ ಹೆಸರು ಇಡಲಾಗಿದ್ದು, ಚನ್ನಗಿರಿ, ಚಿಗಟೇರಿ, ರಾಜನಹಳ್ಳಿ, ಬಿ.ಟಿ. ಮನೆತನಗಳ ಹೆಸರು ಸಾರ್ವಜನಿಕ ಸ್ಥಳಗಳಿಗೆ ಇಟ್ಟಿರುವುದು ಕಾಣ ಸಿಗುತ್ತಿದೆ. ಈ ಎಲ್ಲಾ ಮನೆತನಗಳು ಹಿಂದೆ ಬಡವ-ಬಲ್ಲಿದರಿಗಾಗಿ ಹಲವು ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಿವೆ ಎಂದರು.

           1900ರಲ್ಲಿ ಚನ್ನಗಿರಿ ವಿರೂಪಾಕ್ಷಪ್ಪ ಅವರಿಂದ ಆರಂಭವಾದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಬಡವರಿಗಾಗಿ ಹಲವು ಸೌಲಭ್ಯವನ್ನು ಕಲ್ಪಿಸಿದೆ. ನಂತರ ಅವರ ಪುತ್ರರು ಈ ಟ್ರಸ್ಟ್‍ನಿಂದ ವಿದ್ಯಾರ್ಥಿಗಳಿಗಾಗಿ ಉಚಿತ ಹಾಸ್ಟೇಲ್ ಆರಂಭಿಸಿದ್ದರು. ಹೀಗೆ ಟ್ರಸ್ಟ್ ದಾನ-ಧರ್ಮ ಮಾಡುತ್ತಾ ಜನರ ಸುಖಃ-ದುಃಖಗಳಲ್ಲಿ ಭಾಗಿಯಾಗಿ ಬಡವರಿಗೆ ಇದ್ದ ಕೊರಗು ನೀಗಿಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

            ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್‍ನ ಅಧ್ಯಕ್ಷ ಚನ್ನಗಿರಿ ಆರ್. ವಿರೂಪಾಕ್ಷಪ್ಪ ಮಾತನಾಡಿ, ವಿದ್ಯೆ ಹಣ ನೀಡಿ ಖರೀದಿಲಾಗದ ಹಾಗೂ ಕದಿಯಲಾಗದ ಸಂಪತ್ತು ಆಗಿದೆ. ಮಾನವೀಯ ಮೌಲ್ಯದ ತಳಹದಿಯಲ್ಲಿ ಪಡೆಯುವ ಶಿಕ್ಷಣ ಪರಿಪೂರ್ಣವಾಗಲಿದೆ. ಈ ನಿಟ್ಟಿನಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಈ ಮಟ್ಟಕ್ಕೆ ಏರಿದ್ದೀರಿ. ಬರೀ ಅಂಕ ಗಳಿಕೆ ಮಾತ್ರವೇ ಸಾಧನೆಯಲ್ಲ. ನಿಮ್ಮ ಬದುಕಿನ ಜೊತೆ, ಜೊತೆಗೆ ಸಮಾಜದ ಅಭಿವೃದ್ಧಿಯ ಜವಾಬ್ದಾರಿಯೂ ನಿಮ್ಮ ಹೆಗಲ ಮೇಲಿದೆ ಎಂದರು.

           ನಿಮ್ಮ ದುಡಿಮೆ, ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರುವುದು ಸರಿಯಲ್ಲ. ನಿಮ್ಮ ಗಳಿಕೆಯ ಅಲ್ಪದಷ್ಟು ಭಾಗವನ್ನಾದರೂ ಸಮಾಜ ಸೇವೆ ಹಾಗೂ ದೇಶದ ಅಭಿವೃದ್ಧಿಗೆ ಮೀಸಲು ಇಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೇ ಮಾತ್ರ ಆದರ್ಶ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗಲಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.

             ಈ ಸಂದರ್ಭದಲ್ಲಿ ಸುಮಾರು 140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಸಿ.ಆರ್.ವಿಶ್ವನಾಥ್, ಸಿ.ಆರ್.ಕೃಷ್ಣಮೂರ್ತಿ, ಬಿ.ವಿ.ಗಂಗಪ್ಪ ಶ್ರೇಷ್ಠಿ, ಜೆ.ಎನ್.ವಸಂತಕುಮಾರ್, ಆರ್.ಆರ್.ರಮೇಶ್‍ಬಾಬು, ಸಿ.ಕೆ.ಪ್ರಶಾಂತ್, ಸಿ.ಸಿ.ಬದರೀನಾಥ್ ಮತ್ತಿತರರು ಹಾಜರಿದ್ದರು. ಸಿ.ಆರ್.ಸತ್ಯನಾರಾಯಣ್ ಸ್ವಾಗತಿಸಿದರು. ಸಿದ್ಧಗಂಗಾ ಶಾಲೆ ಮಕ್ಕಳು ನಾಡಗೀತೆ ಹಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link