ಚುನಾವಣೆಗೆ ಈಗನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು

ಚಿತ್ರದುರ್ಗ

         ಈಗಿನಿಂದಲೇ ಸಿದ್ದತೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಸುಲಭವಾಗಿ ಚುನಾವಣೆ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.

          ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಬುಧವಾರ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಸೆಕ್ಟರೆ ಅಧಿಕಾರಿಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

        ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಮೇಲೆ ಕೆಲಸ ಮಾಡಲ್ಲ ಎಂಬ ಮನೋಭಾವನೆ ಬಿಡಬೇಕು. ಲೋಪವಾಗದಂತೆ ಕೆಲಸ ಮಾಡಿ. ಒಂದು ವೇಳೆ ವಿಮುಖರಾಗಲು ಪ್ರಯತ್ನಿಸಿದರೆ ಸುಮ್ಮನಿರಲ್ಲ ಚುನಾವಣೆ ಕರ್ತವ್ಯದಲ್ಲಿ ಇಷ್ಟವಿರಲಿ ಇಲ್ಲದೆ ಇರಲಿ ಕೆಲಸ ಮಾಡಲೇಬೇಕು. ಚುನಾವಣಾ ಕೆಲಸದಿಂದ ಹಿಂದಕ್ಕೆ ಸರಿಯಲು ಯತ್ನಿಸುವಂತ ಪ್ರಯತ್ನ ಯಾರು ಮಾಡಬಾರದು ಎಂದರು.

         ಸೆಕ್ಟರ್ ಅಧಿಕಾರಿಗಳು ಚುನಾವಣೆ ಇನ್ನೂ ಘೋಷಣೆಯಾಗಿಲ್ಲ ಆಗಲೇ ಮತಗಟ್ಟೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮಾಹಿತಿಯನ್ನು ಸಂಗ್ರಹಿಸಿಕೊಟ್ಟಕೊಳ್ಳಬೇಕು. ಮೊದಲು ಮತಗಟ್ಟೆಯ ರೂಟ್ ಮ್ಯಾಪ್ ತಯಾರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ತಡ ಮಾಡಬಾರದು. ಇನ್ನೂ ಸಮಯ ಇದೆ. ನೋಡೋಣ ಮಾಡೋಣ ಎಂಬ ಭಾವನೆ ಬಿಡಬೇಕು. ಈಗಿನಿಂದಲೇ ಸಿದ್ದತೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಸುಲಭವಾಗಿ ಚುನಾವಣೆ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

       ಸೆಕ್ಟರ್ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕು. ಎಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಬೇಕು. ಕಳೆದ ಚುನಾವಣೆಯಲ್ಲಿನ ಮಾರ್ಗಸೂಚಿ ಪ್ರಕಾರ ಕೆಲಸ ಮಾಡಬೇಕು. ಈ ಸಾರಿ ಚುನಾವಣಾ ಆಯೋಗ 1950 ಸಹಾಯವಾಣಿ ಆರಂಭಿಸಿದ್ದು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಈ ಸಹಾಯವಾಣಿ ಮೂಲಕ ನೀಡಬಹುದು. ಇದೊಂದು ಉಚಿತ ಸಹಾಯವಾಣಿ ಎಂದರು.

       ಒಬ್ಬ ಸೆಕ್ಟರ್ ಅಧಿಕಾರಿಗೆ 10ರಿಂದ 12 ಮತಗಟ್ಟೆಗಳನ್ನು ನಿರ್ವಹಣೆ ಮಾಡಬೇಕಾಗಿದೆ. ಮತಗಟ್ಟೆಗಳಲ್ಲಿ ಇವಿಎಂ ಬಗ್ಗೆ ಪ್ರಾತ್ಯಕ್ಷತೆ ನಡೆಸಿಕೊಡಬೇಕು. ಯಾವ ರೀತಿ ಮತದಾನ ಮಾಡುವುದನ್ನು ಅಣುಕು ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ, ಮಹಿಳಾ ಪುರುಷ ಮತದಾರರ ಸಂಖ್ಯೆ ಬಗ್ಗೆ ಮಾಹಿತಿ ಪಡೆದುಕೊಂಡಿರಬೇಕು. ಈಗಿನಿಂದ ಆರಂಭವಾದರೆ ಚುನಾವಣೆ ಪ್ರಕ್ರಿಯೆ ಪೂರ್ಣವಾಗುವರೆಗೂ ಕೆಲಸ ಮಾಡುವಂತೆ ಸೂಚಿಸಿದರು.

        ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಮತಗಟ್ಟೆವಾರು ಮತದಾರರ ಬಗ್ಗೆ ಮಾಹಿತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಗ್ರಾಮಲೆಕ್ಕಿಗ, ಕಂದಾಯಾಧಿಕಾರಿ, ಚುನಾವಣಾಧಿಕಾರಿ, ಪೊಲೀಸ್ ಠಾಣೆ, ಸಬ್‍ಇನ್ಸ್‍ಪೆಕ್ಟರ್ ಮೊಬೈಲ್ ನಂಬರ್‍ಗಳನ್ನು ಪಡೆದುಕೊಳ್ಳಬೇಕು. ಯಾವುದೇ ಸಮಯದಲ್ಲಿ ಏನೆ ಆದರೂ ಅದನ್ನು ಸಮರ್ಥವಾಗಿ ಎದುರಿಸಲು ಸಿದ್ದತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

       ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಚುನಾವಣೆಯಲ್ಲಿ ಮಾರ್ಕ್ ಪೋಲ್ ಅತ್ಯಂತ ಪ್ರಮುಖ ಘಟ್ಟವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾರ್ಕ್ ಪೋಲ್ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ಇದು ಪುನಾರಾವರ್ತನೆಯಾಗದಂತೆ ಎಚ್ಚರವಹಿಸಬೇಕು. ಎಷ್ಟೇ ತರಬೇತಿ ನೀಡಿದರೂ ಕೆಲವು ಸಾರಿ ಲೋಪ ವಾಗಲಿದೆ. ಆದ್ದರಿಂದ ಬಹು ಎಚ್ಚರಿಕೆಯಿಂದ ಚುನಾವಣೆ ಕೆಲಸ ಮಾಡುವಂತೆ ಹೇಳಿದರು.

       ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆಯಲ್ಲಿ 13 ಲಕ್ಷ ಮತದಾರರಿದ್ದು 6.71 ಮತದಾರರು ಪುರುಷರು ಮತ್ತು 6.60 ಲಕ್ಷ ಮಹಿಳಾ ಮತದಾರರಿದ್ದಾರೆ. ಇತರೆ 94 ಮತದಾರರು. 1648 ಮತಗಟ್ಟೆಗಳಿದ್ದು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದಾಗಿದೆ. 158 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಇದು ಮೊದಲ ಹಂತದ ತರಬೇತಿ. ನಂತರ ಮೂರು ನಾಲ್ಕು ತರಬೇತಿಗಳನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ಗ್ರಹಿಸಿಕೊಳ್ಳಬೇಕು. ಯಾವುದೇ ಗೊಂದಲ ಇದ್ದರೂ ಅದನ್ನು ನಿವಾರಿಸಿಕೊಳ್ಳುವಂತೆ ಹೇಳಿದರು.

        ಚುನಾವಣೆ ಪ್ರಕ್ರಿಯೆ ಆರಂಭಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಾದರಿ ಕೋಡ್, ಮತದಾನ ಪ್ರಕ್ರಿಯೆ, ಸಮನ್ವಯತೆ, ಮತದಾನದ ಬಗ್ಗೆ ಜಾಗೃತಿ. ಇಷ್ಟು ಕಾರ್ಯಕ್ರಮಗಳನ್ನು ಸೆಕ್ಟರ್ ಅಧಿಕಾರಿಗಳು ನಡೆಸಬೇಕಾಗಿದೆ ಎಂದರು. ಉಪವಿಭಾಗಾಧಿಕಾರಿ ವಿಜಯಕುಮಾರ್, ಆಹಾರ ಇಲಾಖೆ ಉಪನಿರ್ದೇಶಕ ಮದುಸೂಧನ್, ಆನಂದ್, ಡಾ.ಕಮಾನಿ, ಹೊಸದುರ್ಗ ತಹಸೀಲ್ದಾರ್ ವಿಜಯಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap