ಸಿಲೆಂಡರ್ ಸ್ಪೋಟ 17 ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮ: ಲಕ್ಷಾಂತರ ರೂ ನಷ್ಟ

ಚಳ್ಳಕೆರೆ

       ನಗರದ 5ನೇ ವಾರ್ಡ್ ವ್ಯಾಪ್ತಿಯ ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದಲ್ಲಿರುವ ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, 17ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಗ್ನಿ ಆಕಸ್ಮಿಕಕ್ಕೆ ಗ್ಯಾಸ್ ಸಿಲೆಂಡರ್ ಸ್ಪೋಟವೆಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

      ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಬಡವರು, ನಿರಾಶಿತರು, ಕೂಲಿ ಕಾರ್ಮಿಕರು, ಹಮಾಲರು ಗುಡಿಸಲುಗಳನ್ನು ಹಾಕಿಕೊಂಡು ಜೀವನ ನಿರ್ವಹಿಸುತ್ತಿದ್ದು, ಕಷ್ಟಕರ ಬದುಕನ್ನು ಸಾಗಿಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ 1ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹೊಸ ವರ್ಷದ ಸ್ವಾಗತದ ಸವಿ ನೆನಪುಗಳನ್ನು ಮೆಲಕು ಹಾಕುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, 17ಕ್ಕೂ ಹೆಚ್ಚು ಕುಟುಂಬಗಳು ಈಗ ಬೀದಿಗೆ ಬಂದಿವೆ.

       ಅಗ್ನಿ ಆಕಸ್ಮಿಕಕ್ಕೆ ಕಾರಣವನ್ನು ಹುಡುತ್ತಾ ಹೊರಟಾಗ ಅಲ್ಲಿನ ಕೆಲವರು ಮಾಹಿತಿ ನೀಡಿ, ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಗುಡಿಲಿನಲ್ಲಿ ವಾಸವಾಗಿರುವ ಮಂಜುಳಾ(50)ಎಂಬ ವೃದ್ದೆ ದೇವರ ದೀಪ ಹಚ್ಚಿ ಗ್ಯಾಸ್ ಸ್ಪೌಟ್‍ನಲ್ಲಿ ಅನ್ನ ಮಾಡುತ್ತಿರುವಾಗ ದೇವರಿಗೆ ಹಚ್ಚಿದ ದೀಪ ಗರಿಗೆ ತಗುಲಿ ಬೆಂಕಿ ವ್ಯಾಪಿಸಿದೆ. ಕೂಡಲೇ ಮಂಜುಳಾ ಮನೆಯಿಂದ ಹೊರಗೆ ಬಂದು ಕೂಗಿದ್ದಾರೆ. ಬೆಂಕಿಯನ್ನು ಕಂಡ ಸುತ್ತಮುತ್ತಲ ಜನ ಗಾಬರಿಯಿಂದ ಮನೆಯಿಂದ ಹೊರಗೆ ಬಂದಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಗುಡಿಸಲಿನಲ್ಲಿದ್ದ ಬಟ್ಟೆ, ಆಹಾರ ಧಾನ್ಯ ಹಾಗೂ ಕೆಲವು ವಸ್ತುಗಳನ್ನು ಗುಡಿಸಲುಗಳಿಂದ ಹೊರ ಎಳೆದಿದ್ದಾರೆ. ಆದರೆ, ಬೆಂಕಿ ಹೆಚ್ಚಾಗಿ ಆ ಪ್ರದೇಶದಲ್ಲಿದ್ದ ಕೆಲವರ ಮನೆ ಸಿಲೆಂಡರ್ ಸಹ ಸ್ಪೋಟವಾಗಿ ಬೆಂಕಿಯ ಜ್ವಲ ಇರುವ ಮನೆಗೆಲ್ಲಾ ವ್ಯಾಪಿಸಿದೆ. ಕೆಲವು ಮನೆಯ ಟಿ.ವಿಯೂ ಸಹ ಸ್ಪೋಟಗೊಂಡು ಬೆಂಕಿ ಹರಡಲು ಕಾರಣ ಎನ್ನಲಾಗಿದೆ. ತಕ್ಷಣವೇ ಇಲ್ಲಿನ ಆಗ್ನಿ ಶಾಮಕ ಪಡೆಯ ಒಂದು ವಾಹನ ಬೆಂಕಿ ನಂದಿಸಲು ಪ್ರಾರಂಭಿಸಿದರು. ಬೆಂಕಿಯ ಜ್ವಾಲೆ ಹೆಚ್ಚಾಗಿದ್ದ ಕಾರಣ ಒಂದು ಅಗ್ನಿ ಶಾಮಕ ವಾಹನದಿಂದ ಸಾಧ್ಯವಾಗದ ಕಾರಣ, ನಗರಸಭೆಯ ನೀರಿನ ಜೆಟ್ಟಿಂಗ್ ಮೀಷನ್ ಸಹಾಯದಿಂದ ಬೆಂಕಿಯನ್ನು ನಂದಿಸಲು ಹರಸಾಹಸ ಪಡಲಾಯಿತು. ಕೂಡಲೇ ಚಿತ್ರದುರ್ಗದಿಂದ ಹೆಚ್ಚುವರಿಯಾಗಿ ಎರಡು ಅಗ್ನಿಶಾಮಕ ಪಡೆ ಆಗಮಿಸಿ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ಸಿಯಾಯಿತು.

        ಇದರಿಂದ ಇನ್ನೂ ಹೆಚ್ಚಿನ ಪ್ರಮಾಣದ ಅನಾಹುತವಾಗುವುದು ತಪ್ಪಿತು. ಘಟನೆ ನಡೆದ ಸ್ಥಳದಲ್ಲಿ ಗುಡಿಲುಗಳನ್ನು ಕಳೆದುಕೊಂಡವರ ಗೋಳು ಮುಗಿಲು ಮುಟ್ಟಿತ್ತು. ಕಡು ಬಡವರ್ಗದ ಸುಮಾರು 200ಕ್ಕೂ ಹೆಚ್ಚು ಗುಡಿಸಲು ಇದ್ದು, ಕಳೆದ ವರ್ಷವಷ್ಟೇ ಇಲ್ಲಿನ ನಗರಸಭೆ ಆಡಳಿತ ಇವರಿಗೆ ಪರ್ಯಾಯವಾಗಿ ಬಳ್ಳಾರಿ ರಸ್ತೆಯಲ್ಲಿ ಲಿಡ್ಕರ್ ಸಂಸ್ಥೆಯಿಂದ ನಿವೇಶನಗಳನ್ನು ಗುರುತಿಸಿ ಈಗಾಗಲೇ ಹಕ್ಕು ಪತ್ರಗಳನ್ನು ಸಹ ನೀಡಲಾಗಿದೆ. ಆದರೆ, ಅಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಅಲ್ಲಿ ಯಾರು ವಾಸಿಸುತ್ತಿಲ್ಲ. ಇತ್ತೀಚಿಗಷ್ಟೇ ನಗರಸಭೆ ಆ ಭಾಗದಲ್ಲಿ ಬೋರ್‍ಕೊರೆಸಿದ್ದು, ಉತ್ತಮ ನೀರು ಸಹ ಲಭ್ಯವಾಗಿದೆ.

        ಇಲ್ಲಿನ ನಿವಾಸಿಗಳಾದ ಮಂಜುಳಾ, ಹನುಮಂತಪ್ಪ, ಬಸವರಾಜು, ಗಾಡಿ ರಮೇಶ್, ಕೆ.ಟಿ.ತಿಪ್ಪೇಸ್ವಾಮಿ, ಶಾಂತಮ್ಮ, ನಾಗರಾಜಪ್ಪ, ಸುಮಿತ್ರ, ಶಾಂತಮ್ಮ, ಪಾಪಮ್ಮ, ಅಂಜಿನಪ್ಪ, ಈರಣ್ಣ, ಗಂಗಣ್ಣ, ಅಕ್ಷತ, ಶ್ರೀನಿವಾಸ್, ರವಿಚಂದ್ರ ಮುಂತಾದವರು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಗಾಡಿ ರಮೇಶ್ ಎಂಬುವವರು ತಮ್ಮ ಪುತ್ರ ಮಂಜುನಾಥನ ವಿದ್ಯಾಭ್ಯಾಸಕ್ಕಾಗಿ ಅಂದಾಜು 1.50 ಲಕ್ಷ ಹಣವನ್ನು ತನ್ನ ದಿನನಿತ್ಯದ ಹಮಾಲಿ ಕೂಲಿಯಿಂದ ಸಂಗ್ರಹಿಸಿಟ್ಟಿದ್ದು, ಆ ಹಣವೂ ಸಹ ಬೆಂಕಿಗೆ ಆಹುತಿಯಾಗಿದೆ. ಸುಮಿತ್ರ ಎಂಬುವವರೂ ವ್ಯಾಪಾರ ಮಾಡುವ ಉದ್ದೇಶದಿಂದ ಮಹಿಳಾ ಸ್ವಸಹಾಯ ಸಂಘದಲ್ಲಿ 50 ಸಾವಿರ ರೂ ಸಾಲವನ್ನು ಪಡೆದು ವ್ಯಾಪಾರ ಮಾಡುವ ಉದ್ದೇಶದಿಂದ ಇದ್ದ ಹಣವೂ ಸಹ ಬೆಂಕಿಯಲ್ಲಿ ಸುಟ್ಟಿದೆ. ಅಗ್ನಿ ಅವಘಡದಲ್ಲಿ ಮನೆಯಲ್ಲಿ ಕಳೆದುಕೊಂಡ ಸುಮಾರು 17ಕ್ಕೂ ಹೆಚ್ಚು ಕುಟುಂಬದ ಸದಸ್ಯರು ಗೋಳಾಡುತ್ತಾ ಹಾಗಾಗ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಪ್ರತಿವರ್ಷವೂ ಒಂದಲ್ಲಾ ಒಂದು ದುರಂತವೂ ನಡೆಯುತ್ತಿದ್ದು, ಗುಡಿಸಲುಗಳ ಬದಲಾಗಿ ಖಾಯಂ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

          ಕಳೆದ 2016ರಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಈ ಭಾಗದ ಕೆಲವು ಗುಡಿಸಲು ಸುಟ್ಟಿದ್ದವು, 2017ರಲ್ಲಿ ಕೆರೆಯ ನೀರು ಮನೆಗೆ ನುಗ್ಗಿ ಅವಾಂತರ ಸಂಭವಿಸಿತ್ತು. ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಇಲ್ಲಿನ ನೊಂದ ನಿವಾಸಿಗಳಿಗೆ ನಗರಸಭಾ ಆಡಳಿತ ಗಂಜಿ ಕೇಂದ್ರಗಳ ಮೂಲಕ ಆಹಾರವನ್ನು ನೀಡಿದ್ದರು. ಇಲ್ಲಿರುವ ಎಲ್ಲಾ ರೀತಿಯ ತಾತ್ಕಾಲಿಕ ಗುಡಿಸಲುಗಳು ತೆರವುಗೊಳಿಸುವ ಕಾರ್ಯವನ್ನು ನಗರಸಭೆ ತ್ವರಿತವಾಗಿ ಕೈಗೊಳ್ಳಬೇಕಿದೆ.

         ಸುದ್ದಿ ತಿಳಿದ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ಹೆಚ್ಚುವರಿ ರಕ್ಷಣಾಧಿಕಾರಿ ರಾಮಲಕ್ಷ್ಮಣವರಸಿದ್ದಿ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಸಮನ್ವಯಾಧಿಕಾರಿ ಪಾಲಯ್ಯ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಪಿಎಸ್‍ಐಗಳಾದ ಎನ್.ಗುಡ್ಡಪ್ಪ, ಕೆ.ಸತೀಶ್‍ನಾಯ್ಕ ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ಧಾರೆ.

        ಶಾಸಕ ಟಿ.ರಘುಮೂರ್ತಿ ಕಳವಳ :- ಶಾಸಕ ಟಿ.ರಘುಮೂರ್ತಿ ಅಗ್ನಿ ಆಕಸ್ಮಿಕದಲ್ಲಿ ನೊಂದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಾಲ್ಲೂಕು ಆಡಳಿತಕ್ಕೆ ನಿರ್ದೇಶನ ನೀಡಿದ್ಧಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಅವರು, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಪೌರಾಯುಕ್ತ ಜೆ.ಟಿ.ಹನುಮಂತರಾಜು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಲ್ಲರಿಗೂ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಂತೆ ತಿಳಿಸಿದ್ಧಾರೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap