ಚಳ್ಳಕೆರೆ
ನಗರದ ಹಾಗೂ ಗ್ರಾಮೀಣ ಪ್ರದೇಶಗಳ ಯುವ ಸಮೂಹವನ್ನು ಒಗ್ಗೂಡಿಸುವ ಮತ್ತು ಅವರಲ್ಲಿ ವಿಶ್ವಾಸವನ್ನು ತುಂಬುವ ಏಕೈಕ ಕ್ರೀಡೆ ಎಂದರೆ ಕ್ರಿಕೆಟ್. ಇಂದು ಎಲ್ಲೆಡೆ ಹಳ್ಳಿ, ಹಳ್ಳಿಗಳ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಚರ್ಚೆಗಳು ಆಗುತ್ತಿವೆ.ಮನೋರಂಜನೆಯ ಜೊತೆಗೆ ರಾಷ್ಟ್ರದ ಗೌರವವನ್ನು ಎತ್ತಿ ಹಿಡಿಯುವ ಕ್ರಿಕೆಟ್ ಆಟ ಎಲ್ಲರ ಮೆಚ್ಚಿನ ಆಟವಾಗಿದೆ ಎಂದು ಯುವ ಉದ್ಯಮಿ ಕೆ.ಸಿ.ವೀರೇಂದ್ರ(ಪಪ್ಪಿ) ತಿಳಿಸಿದರು.
ಅವರು, ಭಾನುವಾರ ಬೆಳಗ್ಗೆ ಇಲ್ಲಿನ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಡಿ.ಸುಧಾಕರ ಕ್ರೀಡಾಂಗಣದಲ್ಲಿ ಪ್ರೆಂಡ್ಸ್ ಮತ್ತು ವಾಸವಿ ಕ್ರಿಕೆಟರ್ಸ್ ಹಮ್ಮಿಕೊಂಡಿದ್ದ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಯುವ ಜನಾಂಗ ಕ್ರಿಕೆಟ್ ಕ್ರೀಡೆಯ ಬಗ್ಗೆ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದ್ದು, ಪ್ರತಿಯೊಬ್ಬ ಆಟಗಾರನು ಗೆಲುವಿಗಿಂತ ಕ್ರೀಡಾಸ್ಪೂರ್ತಿಗೆ ಹೆಚ್ಚು ಆದ್ಯತೆ ನೀಡಬೇಕೆಂದರು. ಆಟಗಾರರು ಗೆಲುವು ಮತ್ತು ಸೋಲುಗಳನ್ನು ಸಮನಾಂತರವಾಗಿ ಸ್ವೀಕರಿಸಬೇಕು. ಕ್ರಿಕೆಟ್ ಆಟದ ಬಗ್ಗೆ ಯುವ ಆಟಗಾರರಿಗೆ ಇನ್ನೂ ಹೆಚ್ಚು ತರಬೇತಿ ನೀಡಬೇಕೆಂದರು.
ವ್ಯವಸ್ಥಾಪಕ ಮರವಾಯಿ ಶ್ರೀನಿವಾಸ್ ಮಾತನಾಡಿ, ಡಿ.23ರಿಂದ 25ರ ತನಕ ಮೂರು ದಿನಗಳ ಕಾಲ ಈ ಪಂದ್ಯಾ ನಡೆಯಲಿದ್ದು, ಚಳ್ಳಕೆರೆ ನಗರದ ತಂಡಗಳು ಮಾತ್ರ ಈ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶವಿದೆ. ಈಗಾಗಲೇ 20ಕ್ಕೂ ಹೆಚ್ಚು ತಂಡಗಳು ನೊಂದಾವಣೆ ಮಾಡಿದ್ದು, ಪ್ರತಿ ತಂಡವು 10 ಓವರ್‍ಗಳ ಆಟವನ್ನು ಪ್ರದರ್ಶಿಸಬೇಕಿದೆ. ಲೆದರ್ ಬಾಲ್ ಟೂರ್ನಿಮೆಂಟ್ ಇದಾಗಿದ್ದು, ವ್ಯವಸ್ಥಾಪಕರು ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ. 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ವಿಜೇತ ತಂಡಗಳಿಗೆ ಬಹುಮಾನಗಳನ್ನು ಸಹ ನೀಡಲಾಗುತ್ತಿದೆ.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಕ್ರಿಕೆಟ್ ಆಟ ಮನೋರಂಜನೆಯ ಜೊತೆಗೆ ದೇಶಕ್ಕೆ ಕೀರ್ತಿತಂದುಕೊಡುವ ಆಟವಾಗಿದೆ. ರಾಷ್ಟ್ರ ಮಟ್ಟದಲ್ಲಿ ಖ್ಯಾತರಾದ ವಿವಿಧ ಆmಗಳ ಆಟಗಾರರು ಬಹುತೇಕ ಗ್ರಾಮೀಣ ಪ್ರದೇಶಗಳ ಆಟಗಾರರಾಗಿದ್ದು, ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ರೀತಿಯ ಆಟಗಳು ಚಾಲ್ತಿಯಲ್ಲಿವೆ ಎಂದರು. ಈ ಸಂದರ್ಭದಲ್ಲಿ ದುಗ್ಗಾವರ ಶ್ರೀನಿವಾಸ್, ಪಾಲನೇತ್ರ, ಏಕಾಂತ, ಆದರ್ಶ, ಪ್ರಶಾಂತ್, ತಿಮ್ಮಣ್ಣ, ಡಾ.ಅನಿಲ್, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ