ತುರುವೇಕೆರೆ
ರಸ್ತೆಯ ಅಗಲೀಕರಣಕ್ಕೆ ಮಹೂರ್ತ ಕೂಡಿ ಬಂದ ಹಿನ್ನೆಲೆಯಲ್ಲಿ ದಬ್ಬೆಘಟ್ಟ ರಸ್ತೆಯನ್ನು ರಸ್ತೆ ಮಧ್ಯಭಾಗದಿಂದ ಎರಡೂ ಬದಿ ತಲಾ 50 ಅಡಿ ತೆರವುಗೊಳಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ವಿಶ್ವಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ 50 ವರ್ಷಗಳ ಗುರಿಯನ್ನು ಹೊಂದಿ ರಸ್ತೆ ಅಗಲೀಕರಣಕ್ಕೆ ಜಿಲ್ಲಾ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಸ್ತೆ ಅಗಲೀಕರಣಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ರಸ್ತೆಗಳ ಅಕ್ಕಪಕ್ಕದ ಮರಗಳ ತೆರವು ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಸುಮ್ಮನಿದ್ದವರು ತಮ್ಮ ಕಟ್ಟಡಗಳನ್ನು ಉಳಿಸಿಕೊಳ್ಳಲು ಮುಂದಾಗಿರುವುದು ವಿಪರ್ಯಾಸ.
ವಾಸ್ತವವಾಗಿ ಜಿಲ್ಲಾ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಕನಿಷ್ಠ 25 ಮೀಟರ್ ರಸ್ತೆ ಅಗಲೀಕರಣವಾಗಬೇಕು ಎಂಬ ನಿಯಮವಿದೆ. ಆದರೆ ಸದ್ಯ ದಬ್ಬೆಘಟ್ಟ ರಸ್ತೆ ನಿರ್ಮಾಣದ ವೇಳೆ ರಸ್ತೆಯ ಮಧ್ಯಭಾಗದಿಂದ ಕನಿಷ್ಠ 50 ಅಡಿಯನ್ನಾದರೂ ಬಳಸಿಕೊಂಡು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಅವರು ಆಗ್ರಹಿಸಿದರು.
ದಬ್ಬೆಘಟ್ಟ ರಸ್ತೆಯಲ್ಲಿ ಹಲವಾರು ಸರ್ಕಾರಿ ಕಚೇರಿಗಳು, ನ್ಯಾಯಾಲಯ, ಶಾಲಾ ಕಾಲೇಜುಗಳು, ಹಾಸ್ಟೆಲ್‍ಗಳು, ಬಸ್ ನಿಲ್ದಾಣ, ಬಸ್ ಡಿಪೋ, ಕಲ್ಯಾಣಮಂದಿರಗಳು ಸೇರಿದಂತೆ ಹಲವಾರು ಜನಸಂಪರ್ಕ ಕಚೇರಿಗಳಿವೆ. ಪ್ರತಿದಿನ ಮೂರುವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಹಾಗಾಗಿ ಈ ರಸ್ತೆ ಬಹಳ ಕಿರಿದಾಗಿದೆ. ಆದ್ದರಿಂದ ಕೂಡಲೇ ರಸ್ತೆ ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಮುಂದಿನ 50 ವರ್ಷಗಳ ದೃಷ್ಟಿಕೋನವನ್ನು ಇಟ್ಟುಕೊಂಡು ರಸ್ತೆ ಅಗಲೀಕರಣ ಮಾಡಬೇಕೆಂದು ಸಿದ್ದಲಿಂಗೇಗೌಡ ಆಗ್ರಹಿಸಿದರು.
ವೈಟಿ ರಸ್ತೆ ಪಾಠ – ಈಗಾಗಲೇ ನಿರ್ಮಿಸಿರುವ ತಿಪಟೂರು ರಸ್ತೆ ನಿರ್ಮಾಣದಲ್ಲಿ ಜನಪ್ರತಿನಿಧಿಗಳ ಹಾಗೂ ಕಟ್ಟಡ ಮಾಲೀಕರ ಮುಲಾಜಿಗೆ ಒಳಗಾಗಿ ರಸ್ತೆ ಅಗಲೀಕರಣ ಮಾಡುವ ವೇಳೆ ಮೂಲ ದಾಖಲಾತಿಗಳ ಪ್ರಕಾರ ಕಾಮಗಾರಿಯನ್ನು ನಡೆಸದೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಲೋಪ ಎಸಗಿದ್ದರು. ಈ ಪ್ರಕರಣ ಲೋಕಾಯುಕ್ತ ಮೆಟ್ಟಿಲು ಏರಿದ್ದು ತನಿಖೆ ಕೂಡ ನಡೆದಿದೆ. ರಸ್ತೆ ನಿರ್ಮಾಣದಲ್ಲಿ ಲೋಪವಾಗಿರುವುದು ಕಂಡುಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಯಲ್ಲಿ ಲೋಪ ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶಿಕ್ಷೆಯಾಗಲಿದೆ.
ಅಲ್ಲದೆ ಪುನಃ ಉದ್ದೇಶಿತ ನಕ್ಷೆಯ ರೀತ್ಯವೇ ಮರು ರಸ್ತೆ ನಿರ್ಮಾಣ ಮಾಡಲು ಕಟ್ಟಡಗಳನ್ನು ಒಡೆಯುವುದು ಅನಿವಾರ್ಯವಾಗಲಿದೆ ಎಂಬ ಆದೇಶ ಸದ್ಯದಲ್ಲೇ ಹೊರಬರುವ ಸಾಧ್ಯತೆ ಇದೆ. ತಿಪಟೂರು ರಸ್ತೆ ನಿರ್ಮಾಣದಲ್ಲಿ ಆದ ಲೋಪದಂತೆಯೇ ದಬ್ಬೆಘಟ್ಟ ರಸ್ತೆ ಅಗಲೀಕರಣದಲ್ಲಿ ಲೋಪವಾದಲ್ಲಿ ಅಧಿಕಾರಿಗಳು ಸಮಸ್ಯೆಗೆ ಸಿಲುಕುತ್ತಾರೆ ಎಂದು ಎಚ್ಚರಿಸಿದರು.
ವರದಿ ನೀಡಲು ಸೂಚನೆ – ದಬ್ಬೆಘಟ್ಟ ರಸ್ತೆ ಅಗಲೀಕರಣ ಸಂಬಂಧ ತಾವು ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಹೇಳಿದ ಅವರು ನ್ಯಾಯಾಧೀಶ ಬಿ.ಎಲ್.ಜಿನರಾಳ್ಕರ್‍ರವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಜ.25 ರೊಳಗೆ ತಮಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ವರದಿಗಾರರಿಗೆ ಸಿದ್ದಲಿಂಗೇಗೌಡ ತಿಳಿಸಿದರು.
21 ರಂದು ಸಭೆ – ದಬ್ಬೆಘಟ್ಟ ರಸ್ತೆ ಅಗಲೀಕರಣವನ್ನು ಶೀಘ್ರದಲ್ಲೇ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನಾ ಕಾರ್ಯ ಹಮ್ಮಿಕೊಳ್ಳುವ ಸಂಬಂಧ ಜ.21 ರಂದು ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು, ಅಂದು ಸಭೆಗೆ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು, ವರ್ತಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಸಂಚಾಲಕರಾದ ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ ಹಾಗೂ ಜಿ.ಆರ್.ರಂಗೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ