ಹುಳಿಯಾರು
ಪ್ಯಾಟೆಗೆ ಓಲಿಸಿದರೆ ಹಳ್ಳಿಗಳಲ್ಲೇ ಇನ್ನೂ ದೇಸಿ ಆಹಾರ ಪದ್ಧತಿ ಜೀವಂತವಾಗಿದೆ. ಹಳ್ಳಿಗರು ಸಿರಿಧಾನ್ಯಗಳನ್ನು ಇನ್ನೂ ಬಳಸುತ್ತಿದ್ದಾರೆ. ಹಳ್ಳಿಗೆ ಕಾಲಿಟ್ಟರೆ ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ, ಆರ್ಕದ ಅನ್ನ ಗಟ್ಟಿ ಮೊಸರಿನ ಗಮಲು ತುಂಬಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಹಳ್ಳಿಗರ ಆಹಾರ ಪಟ್ಟಿಯಲ್ಲಿ ಸಿರಿಧಾನ್ಯಗಳಿಲ್ಲಿ ಎನ್ನುವ ಆತಂಕಕಾರಿ ಅಂಶ ಹುಳಿಯಾರು ಹೋಬಳಿಯ ಬರಕನಹಾಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ಎನ್ ಎಸ್ ಎಸ್ ಶಿಬಿರ ಬರಕನಹಾಲ್ ಗ್ರಾಮದಲ್ಲಿ ಏರ್ಪಡಿಸಿದ್ದು ಶಿಬಿರಾರ್ಥಿಗಳು ಗ್ರಾಮಸ್ಥರ ಜೀವನ ಶೈಲಿ ಸಮೀಕ್ಷೆ ಮಾಡುವಾಗ ಈ ಅಂಶ ಬೆಳಕಿಗೆ ಬಂದಿದ್ದು ಇಲ್ಲಿನ ಬಹುಪಾಲು ಮಂದಿ ಮುದ್ದೆಗಾಗಿ ರಾಗಿ ಬಳಸುವುದು ಬಿಟ್ಟರೆ ಉಳಿದ ಸಿರಿಧಾನ್ಯ ಬಳಸುವುದಿಲ್ಲ. ಯುವ ಸಮೂಹವಂತೂ ಕೆಲ ಸಿರಿಧಾನ್ಯಗಳನ್ನೇ ಇನ್ನೂ ನೋಡಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ.
ಪೂರ್ವಜರು ಹಿಂದೆ ಹಲ್ಲು ಉಜ್ಜಲು ಬೇವಿನ ಕಡ್ಡಿ, ಕುರಂಬಳೆ ಕರಕು, ತಲೆ ತೊಳೆಯಲು ಸೀಗೆಪುಡಿ, ಬಟ್ಟೆ ತೊಳೆಯಲು ಚೌಳು ಬಳಸುಸಿದ್ದರು. ಆದರೆ ಈಗ ಈ ಹಳ್ಳಿಯಲ್ಲಿ ಇದ್ಯಾವುದೂ ಇಲ್ಲವಾಗಿದ್ದು ಪೇಸ್ಟ್, ಶಾಂಪು, ಸೋಪು ಬಳಸುತ್ತಿರುವುದಾಗಿ ಹೇಳಿಕೊಂಡಿದ್ದು ಜಾಗತೀಕರಣದ ಪ್ರಭಾವ ಇಲ್ಲಿ ಬೀರಿರುವುದು ಸ್ಪಷ್ಟವಾಗಿದೆ.
ಉಳಿದಂತೆ ಒಳಕಲ್ಲು ಜಾಗಕ್ಕೆ ಮಿಕ್ಸಿ, ಬೀಸುವಕಲ್ಲು ಜಾಗಕ್ಕೆ ಮಿಲ್ಲು, ಸೌದೆ ಒಲೆ ಜಾಗಕ್ಕೆ ಗ್ಯಾಸ್, ಬಯಲು ನಾಟಕದ ಜಾಗಕ್ಕೆ ಧಾರವಾಹಿ, ಕುಂಟೆಬಿಲ್ಲೆ, ಮರಕೋತಿ ಜಾಗಕ್ಕೆ ಮೊಬೈಲ್, ಸೈಕಲ್ ಜಾಗಕ್ಕೆ ಬೈಕ್, ಎತ್ತಿನಗಾಡಿ ಜಾಗಕ್ಕೆ ಆಟೋ, ಟಾಟಾ ಏಸ್ ಬಂದಿದೆ. ಸ್ತ್ರೀಯರನ್ನು ಓದಿಸುತ್ತಾರೆಂತೆ ಕೆಲಸಕ್ಕೆ ಕಳುಹಿಸುವುದಿಲ್ವಂತೆ, ಕುಟುಂಬದ ಸದಸ್ಯರ ನಡುವೆ ಬೆಸುಗೆ, ಒಡನಾಟ ಕಡಿಮೆಯಾಗಿದೆಯಂತೆ.
ಒಟ್ಟಾರೆ ಗ್ರಾಮೀಣ ಜನರ ಜೀವನದಲ್ಲಿ ಜಾಗತೀಕರಣದ ಪ್ರಭಾವ ಹಾಸುಹೊಕ್ಕಾಗಿರುವುದು ಕಾಣಬಹುದಾಗಿದೆ. ಗ್ಯಾಸ್, ಶುದ್ಧನೀರು, ಮಹಿಳಾ ಶಿಕ್ಷಣ ಧಾನಾತ್ಮಕ ಕೊಡುಗೆಗಳ ಜೊತೆಗೆ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವುದು, ದೇಸಿಯ ಆಹಾರ ಪದ್ಧತಿಯಿಂದ ವಿಮುಖರಾಗಿರುವ ಆತಂಕಕಾರಿ ಬೆಳವಣಿಗೆಯನ್ನು ಸಮೀಕ್ಷೆ ದೃಢಪಡಿಸಿದೆ.
ಸಮೀಕ್ಷಾ ಕಾರ್ಯದಲ್ಲಿ ಎನ್‍ಎಸ್‍ಎಸ್ ಶಿಬಿರಾಧಿಕಾರಿಗಳಾದ ಎಂ.ಜೆ.ಮೋಹನ್ ಕುಮಾರ್, ಫರ್ನಾಜ್, ಸಹ ಶಿಬಿರಾಧಿಕಾರಿಗಳಾದ ಕೆ.ಸಿ.ಕುಮಾರಸ್ವಾಮಿ, ಎನ್.ಎ.ಮಂಜುನಾಥ್, ಉಪನ್ಯಾಸಕರುಗಳಾದ ಪ್ರೊ.ಮಲ್ಲಿಕಾರ್ಜುನ್, ಡಾ.ಸುಷ್ಮಾಬಿರದಾರ್, ಪ್ರೊ.ವಲಿ, ಹಾಗೂ ಇಪ್ಪತ್ತೈದು ಮಂದಿ ಶಿಬಿರಾರ್ಥಿಗಳು ಬಾಗವಹಿಸಿದ್ದರು.